ಅಧ್ಯಾತ್ಮ, ಶಿಕ್ಷಣಕ್ಕೆ ಮಠಗಳ ಕೊಡುಗೆ ಅಪಾರ
ರಬಕವಿ -ಬನಹಟ್ಟಿ : ಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುವ ಜೊತೆಗೆ ಅನ್ನ ದಾಸೋಹ, ಜ್ಞಾನ ದಾಸೋಹ ಕಲ್ಪಿಸಿ ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮಠಗಳು ನೀಡುತ್ತಿರುವ ಕೊಡುಗೆ ಅಪಾರವೆಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ರಬಕವಿ -ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ನಿರೂಪಾಧಿಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಹಾನಗಲ್ಲ ಕುಮಾರ ಶಿವಯೋಗಿಗಳವರ 155ನೇ ಜನ್ಮ ಜಯಂತಿ, ಪ್ರವಚನ ಮಹಾಮಂಗಲ ಸಮಾರಂಭ, ನಿವೃತ್ತ ಉಪಪ್ರಾಚಾರ್ಯ ದಾಶಾಳದ ಸಿ. ಎಂ. ಹಿರೇಮಠ ಅವರ ಮರೇಗುದ್ದಿ ಶ್ರೀ ಮಡಿವಾಳೇಶ್ವರ ಮಹಿಮಾಮೃತ ಗ್ರಂಥ ಲೋಕಾರ್ಪಣೆಗೊಳಿಸಿ, ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಯಲ್ಲಟ್ಟಿ ನಿರುಪಾಧೀಶ್ವರ ಮಠದ ಶ್ರೀ ಗುರುಪಾದ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಕಲಾವಿದರನ್ನು, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಗುಣದಾಳದ ಡಾ. ವಿವೇಕಾನಂದ ದೇವರು ಸಮ್ಮುಖ ವಹಿಸಿದ್ದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ. ಕೃ. ಮೇಗಾಡಿ ಸನ್ಮಾನ ಸ್ವೀಕರಿಸಿ ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯ, ಕಲೆ, ಜಾನಪದ ಸಂಸ್ಕೃತಿ ವಿಶಿಷ್ಟ ಕಲೆಗಳನ್ನು, ಕಲಾವಿದರನ್ನು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಠಗಳ ಕೊಡುಗೆ ಸ್ಮರಣೀಯವಾದುದು ಎಂದರು. 2016ರಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಹಮ್ಮಿಕ್ಕೊಂಡಿದ್ದ ಬಾಗಲಕೋಟೆ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ಯಲ್ಲಟ್ಟಿಯಲ್ಲಿ ಯಶಸ್ವಿಗೊಳಿಸಿದ ಕೀರ್ತಿ ಚಿಮ್ಮಡ, ಯಲ್ಲಟ್ಟಿ, ಮರೇಗುದ್ದಿ ಮಠಗಳ ಪೂಜ್ಯರು, ಜನಪ್ರತಿನಿಧಿಗಳು, ಸದ್ಭಕ್ತರು, ಸಾಹಿತಿಗಳು, ಕಲಾವಿದರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಜಮಖಂಡಿಯ ಡಾ. ಯಶವಂತ ಕೊಕ್ಕನವರ ಜಾನಪದರು ಕಂಡುಂಡ ಅನುಭವಗಳನ್ನು, ಹಬ್ಬ ಹರಿದಿನಗಳ ಆಚರಣೆ, ಜಾನಪದ ಸಾಹಿತ್ಯದ ವೈಶಿಷ್ಟತೆಯನ್ನು ಹಾಡುಗಳ ಮೂಲಕ ಹೇಳಿ ರಂಜಿಸಿದರು.
ಬಸವರಾಜ ಬಿರಾದಾರ ಅವರ ಭರತನಾಟ್ಯ ಗಮನಸೆಳೆಯಿತು.
ನಾವಲಗಿಯ ಹಿರೇಮಠ ಗುರುಗಳು ಪ್ರವಚನ ಮಹಾಮಂಗಲ ನಡೆಸಿಕೊಟ್ಟರು.
ದಾಶಾಳದ ಹಿರಿಯ ಸಾಹಿತಿ ವೇದಮೂರ್ತಿ ಚನ್ನಯ್ಯಸ್ವಾಮಿ ಹಿರೇಮಠ ದಂಪತಿಗಳನ್ನು ಸನ್ಮಾನಿಸಿ ಚಿನ್ನದುಂಗುರವನ್ನು ಯಲ್ಲಟ್ಟಿ ಪೂಜ್ಯರು ತೊಡಿಸಿದರು. ಕಲಾವಿದ
ರುದ್ರೇಶ ಜಾನಮಟ್ಟಿ ವಚನಪ್ರಾರ್ಥನೆ ನಡೆಸಿಕೊಟ್ಟರು. ಗುರು ಎಂ. ಯಲಶೆಟ್ಟಿ ಸ್ವಾಗತಿಸಿದರು. ಶ್ರೀಶೈಲ ಎಂ. ತೇಲಿ ನಿರೂಪಿಸಿದರು. ನಿವೃತ್ತ ಶಿಕ್ಷಕ ಜಿ. ಎಚ್. ಮೋಪಗಾರ ವಂದಿಸಿದರು.
ಶುಕ್ರವಾರ ಬೆಳಿಗ್ಗೆ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಸಕಲ ವಾದ್ಯ ವೃಂದದೊಂದಿಗೆ ಗ್ರಾಮದಲ್ಲಿ ನಡೆಯಿತು.
ಚಿಮ್ಮಡ ವಿರಾಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಅಯ್ಯಾಚಾರ ದೀಕ್ಷಾ ವಿಧಿ ನಡೆಸಿಕೊಟ್ಟರು.