ಮಹಲಿಂಗಪುರ

ಅರ್ಧ ಶತಮಾನ ಬದುಕು ಸವೆಸಿದ ಬಡವರ ಬಾಳು ಬೀದಿಪಾಲು ! ಅಸಲಿ 32 ಕುಟುಂಬಗಳಿಗೆ ಮಾತ್ರ ಮನೆಗಳನ್ನು ನೀಡಿ - ರಂಗನಗೌಡ

ಅರ್ಧ ಶತಮಾನ ಬದುಕು ಸವೆಸಿದ ಬಡವರ ಬಾಳು ಬೀದಿಪಾಲು ! ಅಸಲಿ 32 ಕುಟುಂಬಗಳಿಗೆ ಮಾತ್ರ ಮನೆಗಳನ್ನು ನೀಡಿ - ರಂಗನಗೌಡ


ಮಹಾಲಿಂಗಪುರ 03: ಸೈದಾಪೂರ- ಸಮೀರವಾಡಿ ಗ್ರಾಮಪಂಚಾಯತ ವ್ಯಾಪ್ತಿಯ ಕೆನಲ್ ಮೇಲೆ ಸುಮಾರು ಅರ್ಧ ಶತಮಾನ ಬದುಕು ಸವೇಶಿದ ಬಡವರು ವಾಸವಿರುವ ಮನೆಗಳನ್ನು ಕೋರ್ಟ್‌ ಆದೇಶದಂತೆ ಬುಧವಾರ ಜಿಎಲ್‌ಬಿಸಿ ತೆರುವುಗೊಳಿಸುತ್ತಿರುವುದರಿಂದ ಇಲ್ಲಿಯ ನಿವಾಸಿಗಳು ಅಕ್ಷರಶಃ ಬೀದಿಪಾಲಾಗಿದ್ದಾರೆ.  

ಇದೇ ವಿಷಯದ ಮೇಲೆ 2019ರಲ್ಲಿ ಇಲ್ಲಿ ವಾಸವಿರುವ ಶೆಡ್ಡಿನ ಮನೆಗಳಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮಾಜಿ ಸಚಿವೆ ಉಮಾಶ್ರೀ ಆದಿಯಾಗಿ ಪಕ್ಷಭೇದ ಮರೆತು ಜನಪ್ರತಿನಿಧಿಗಳು, ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಹೋರಾಟ ನಡೆಸಿದ್ದರು. 

ಇದರ ಫಲವಾಗಿ ಅಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಹೋರಾಟಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಇದೇ ಜಾಗೆಯಲ್ಲಿ ಮುಂದುವರೆಯಿರಿ ಮತ್ತು ಜಾಗೆ ಶೋಧಿಸಿ ವಸತಿ ಯೋಜನೆ ಅಡಿಯಲ್ಲಿ ತಮ್ಮೆಲ್ಲರಿಗೂ ಮನೆಗಳನ್ನು ಒದಗಿಸುತ್ತೇವೆ ಎನ್ನುವ ಭರವಸೆಯನ್ನು 188 ಕುಟುಂಬಗಳಿಗೆ ನೀಡಿದ್ದರೆಂದು ಮತ್ತು ಈಗ ಎಲ್ಲಿಯೂ ಜಾಗ ಇರದ ಕಾರಣ ಈ ರೀತಿಯ ಸಮಸ್ಯೆ ತಲೆದೋರಿದೆ ಎಂದು ಗ್ರಾಂ.ಪಂ ಸದಸ್ಯ ಮಹಾಲಿಂಗಪ್ಪ ಸನದಿ ತಿಳಿಸುತ್ತಾರೆ. 

188 ಮನೆಗಳಲ್ಲಿ ಆಜಾದ ನಗರದಲ್ಲಿ 21, 3ನೇ ವಾರ್ಡ್‌ (ಕ್ರಾಸ್) ನಲ್ಲಿ 6/7 ಮತ್ತು ವಾರ್ಡ್‌ ನಂಬರ 5ರಲ್ಲಿ ಉಳಿದ ಎಲ್ಲ ಮನೆಗಳಿವೆ. ಇವರಿಗೆ ಏನಾದರೂ ವ್ಯವಸ್ಥೆ ಮಾಡಲಿಕ್ಕೆ ಸೈದಾಪುರ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಗೋಮಾಳ ಅಥವಾ ಅರಣ್ಯ ಇಲಾಖೆ, ಇನ್ನಿತರೆ ಸರ್ಕಾರಿ ಜಾಗೆಗಳಿಲ್ಲ.  

ಸರ್ಕಾರ ಖಾಸಗಿ ಜಮೀನು ಖರೀದಿಸಿ ಕೊಡಬೇಕೆಂದರೆ ಈ ಭಾಗದಲ್ಲಿ ರೈತರು ಸಣ್ಣ ಹಿಡುವಳಿದಾರು ಇರುವುದರಿಂದ ಜಮೀನುಗಳನ್ನು ಯಾರೂ ಮಾರಾಟ ಮಾಡುತ್ತಿಲ್ಲ ಹೀಗಾಗಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಆದರೂ ಕೂಡ ಶಾಸಕರಿಗೆ ಇದಕ್ಕೊಂದು ನ್ಯಾಯ ಒದಗಿಸಿಕೊಡಲು ಕೇಳಿಕೊಳ್ಳುತ್ತೇವೆ ಎಂದು ಮಹಾಲಿಂಗಪ್ಪ ಸನದಿ ಹೇಳುತ್ತಾರೆ. 

ಬಾಕ್ಸ ನ್ಯೂಸ್ 

ಅಂದಾಜು 45 ವರ್ಷಗಳಿಂದ ಕೆನಲ್ ಮೇಲೆ ವಾಸಿಸುವ ಬಡವರಿಗೆ ಸ್ಥಳೀಯ ಶಾಸಕರು 1ಎಕರೆ ಭೂಮಿಯನ್ನು ಖರೀದಿಸಿ ಸರಕಾರದ ಅಡಿಯಲ್ಲಿ ಅಸಲಿ ಇರುವ 32 ನಿರಾಶ್ರಿತ ಕುಟುಂಬಗಳಿಗೆ ಮಾತ್ರ ಮನೆಗಳನ್ನು ನೀಡಬೇಕು. ಉಳಿದಂತೆ ಗ್ರಾಮ ಪಂಚಾಯತ ಸದಸ್ಯರು, ಇನ್ನಿತರರು ತಮಗೆ ಮನಬಂದಂತೆ ಶಡ್ ಗಳನ್ನು ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಶಾಸಕರು ಇಂತಹವರಿಗೆ ಸ್ಪಂದಿಸದೆ ಅಸಲಿ ನಿರಾಶ್ರಿತರಿಗೆ ಆಸರೆಯಾಗಬೇಕು. ನೊಂದ ಕುಟುಂಬಗಳ ಜೊತೆಯಲ್ಲಿ ಕಾಂಗ್ರೆಸ್ ಪಕ್ಷ ಸಹಕಾರಕ್ಕಾಗಿ ಸಿದ್ಧವಿದೆ ಯಾರೂ ಅಧೈರ್ಯಗೊಳ್ಳಬಾರದು. 

* ರಂಗನಗೌಡ ಪಾಟೀಲ್, ಮಾಜಿ ಸೈದಾಪುರ ಗ್ರಾ.ಪಂ. ಹಾಗೂ ಕೆಎಂಎಫ್ ಅಧ್ಯಕ್ಷ. 

----- 

ಕೋರ್ಟ್‌ ಆದೇಶದಂತೆ ಜಿ ಎಲ್ ಬಿ ಸಿ ಅವರು ತಮ್ಮ ಜಾಗೆಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಇದರಲ್ಲಿ ನಮ್ಮದೇನು ಹಸ್ತಕ್ಷೇಪವಿಲ್ಲ. ಅಲ್ಲಿಯ ನಿವಾಸಿಗಳು ತಾವೇ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಹಾಗೆನಾದರೂ ಎಲ್ಲಿಯಾದರೂ ಜಾಗವಿದ್ದರೆ ತಿಳಿಸಿ ವ್ಯವಸ್ಥೆ ಮಾಡುತ್ತೇವೆ. 

* ಸಿದ್ದು ಸವದಿ, ತೇರದಾಳ ಶಾಸಕರು. 

---- 


ಸುದ್ದಿ ಓದಿ