ಗುಳೇಗುಡ್ಡ

ಬಹುತ್ವದ ನೆಲೆಯಲ್ಲಿ ಕನಕದಾಸರನ್ನು ಓದಬೇಕು : ಡಾ. ಮಂಜಣ್ಣ

ಬಹುತ್ವದ ನೆಲೆಯಲ್ಲಿ ಕನಕದಾಸರನ್ನು ಓದಬೇಕು : ಡಾ. ಮಂಜಣ್ಣ

ಗುಳೇದಗುಡ್ಡ,22:  ದಾರ್ಶನಿಕರನ್ನು ಕೇವಲ ಜಾತಿ, ಲಿಂಗ, ಧರ್ಮದ ಸಂಕುಚಿತ ನೆಲೆಗಳಲ್ಲಿ ಕಾಣುವ ಪರಂಪರೆ ಇಂದು ಬೆಳೆಯುತ್ತಿದೆ. ಬದಲಾಗಿ ಕನಕದಾಸರಂತಹ ದಾರ್ಶನಿಕರನ್ನು ಬಹುತ್ವದ ನೆಲೆಯಲ್ಲಿ ಕಾಣಬೇಕಿದೆ ಎಂದು ಪಟ್ಟಣದ ಭಂಡಾರಿ ಮತ್ತು ರಾಠಿ ಕಾಲೇಜಿನ ಪ್ರಾಧ್ಯಾಪಕ ಡಾ.ಮಂಜಣ ್ಣ ಹೇಳಿದರು. 

  ಸೋಮವಾರ ಪಟ್ಟಣದ ಜಗದ್ಗುರು ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕನಕದಾಸರು ಸಂತರಾಗಿ, ದಾರ್ಶನಿಕರಾಗಿ ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದರು. ಅವರು ಕೃತಿ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಅಜ್ಞಾನವನ್ನು ಹೋಗಲಾಡಿಸಲು ತಮ್ಮ ಜೀವನವನ್ನೇ  ಮುಡಿಪಾಗಿಟ್ಟಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.  ಜಾತಿರಹಿತ ಸಮಾಜದ ಬಗೆಗೆ ಕನಕದಾಸರು ಹೇಳೆದ್ದೇನೆಂದರೆ,  ಆತ್ಮ ಯಾವ ಕುಲ, ಜೀವ ಯಾವ ಕುಲ? ತತ್ವೇಂದ್ರಿಯ ಕುಲ ಪೇಳಿರಯ್ಯಾ? ಎಂದು ಪ್ರಶ್ನಿಸುವ ಮೂಲಕ ಎಲ್ಲರೂ ಒಂದೇ ಎಂದು ಹೇಳಿ ಮಹಾನ್ ಸಂತರೆನಿಸಿದ್ದಾರೆ. ಅವರು ರಾಮಧಾನ್ಯ ಚರಿತೆ ಕೃತಿಯ ಮೂಲಕ ಸಮಾಜದಲ್ಲಿರುವ ಅಸಮಾನತೆಯವಿರುದ್ದ ಮಾತನಾಡಿ ಸಮಾನತೆಯ ಪರಿಕಲ್ಪನೆಯನ್ನು ರಾಗಿ ಮತ್ತು ಭತ್ತದ ವಾಗ್ವಾದದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು. 

   ಕಾಲೇಜಿನ ಪ್ರಾಚಾರ್ಯೆ ಡಾ.ಪಿ.ಆಯ್‌.ಮೋಮಿನ್ ಅಧ್ಯಕ್ಷತೆವಹಿಸಿ ಮಾತನಾಡಿ, ಕನಕದಾಸರ ಚಿಂತನೆಗಳು ವಿಶ್ವಕ್ಕೆ ಮಾದರಿಯಾಗಿವೆ. ಅಂತಹ ಸಂತ, ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ಸರಸ್ವತಿ ನಾಯಕ ಹಾಗೂ ಕೀರ್ತಿ ಕನಕದಾಸರ ಜೀವನ, ಸಾಹಿತ್ಯದ ಕುರಿತು ಮಾತನಾಡಿದರು.  

  ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮೇರಿ ಆಸಂಗಿ, ವಿಠ್ಠಲ ಬದಿ, ಡಾ.ಎಚ್‌.ಎಸ್‌.ಘಂಟಿ  ಉಪಸ್ಥಿತರಿದ್ದರು. 


ಸುದ್ದಿ ಓದಿ