ಮಹಾಲಿಂಗಪುರ ನೂತನ ತಾಲೂಕು ಕೇಂದ್ರಕ್ಕೆ ಒತ್ತಾಯ
ಸಾರ್ವಜನಿಕರ ಆಡಳಿತಾತ್ಮಕ ಗೊಂದಲ ನಿವಾರಿಸಲೂ ಆಗ್ರಹ.
ಮಹಾಲಿಂಗಪುರ ೦೭ : ನಗರವನ್ನು ತಾಲೂಕು ಸ್ಥಳವನ್ನಾಗಿ ಘೋಷಿಸಬೇಕೆಂದು ಕಳೆದ 40ವರ್ಷಗಳಿಂದ ಸ್ಥಳೀಯರ ಹಾಗೂ ಸುತ್ತಲಿನ ಗ್ರಾಮಗಳ ಜನರ ಕೂಗಾಗಿದೆ ಎಂದು ಜೆಡಿಎಸ್ ಧುರಿನ ನಿಂಗಪ್ಪ ಬಾಳಿಕಾಯಿ ಅಭಿಪ್ರಾಯಪಟ್ಟಿದ್ದಾರೆ
ಏಕೆಂದರೆ ಭೌಗೋಳಿಕ, ವಾಣಿಜ್ಯಕ, ಶೈಕ್ಷಣಿಕ ಹಾಗೂ ವೈದ್ಯಕೀಯವಾಗಿ ಅಭಿವೃದ್ಧಿ ಹೊಂದಿ ವಿವಿಧ ಮಹಾನಗರಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಪಟ್ಟಣ ಕೇಂದ್ರವೂ ಆಗಿದೆ.
ತಾಲೂಕು ಸ್ಥಳವಾಗಲು ಕಾನೂನಾತ್ಮಕ ಎಲ್ಲ ಮಾನದಂಡಗಳಿದ್ದರೂ ಹಾಲಿ ಹಾಗೂ ಮಾಜಿ ಸರ್ಕಾರಗಳು ನಗರವನ್ನು ತಾಲೂಕ ಕೇಂದ್ರವೆಂದು ಘೋಷಿಸಲು ಮೀನಾಮೇμÀದ ರಾಜಕೀಯ ದಾಳ ಮಾತ್ರ ಸ್ಥಳೀಯರಿಗೆ ತಿಳಿಯುತ್ತಿಲ್ಲ.
ತೇರದಾಳ ನೂತನ ತಾಲೂಕಿಗೆ ಸ್ಥಳೀಯರ ಸ್ವಾಗತವಿದೆ. ಆದರೆ ಆಡಳಿತಾತ್ಮಕವಾಗಿ ಆರೋಗ್ಯ, ಶಿಕ್ಷಣ, ಇನ್ನೂ ಅನೇಕ ಇಲಾಖಾ ಕಚೇರಿಗಳು ಮುಧೋಳದಲ್ಲಿದ್ದರೆ, ಕಂದಾಯ ಇಲಾಖೆ ಸಂಪೂರ್ಣ ವರ್ಗಾವಣೆಯಾಗದೆ, ಮಹಾಲಿಂಗಪುರ ಭಾಗದ ಜನತೆ ಜಮೀನು ನಕ್ಷೆ ಹಾಗೂ ಇತರೆ ಕಾಗದಪತ್ರಗಳಿಗಾಗಿ ತೇರದಾಳದ ನಾಡ ಕಚೇರಿಯನ್ನು ಅವಲಂಬಿಸಬೇಕು.
ಖರೀದಿ ನೋಂದಣಿ ಹಾಗೂ ನೋಂದ ಬೋಜಾ ಕಡಿಮೆಗೆ ಮುಧೋಳಕ್ಕೆ ಹೋಗಬೇಕು. ಸಾದಾ ಬೋಜಾ ಕಡಿಮೆ ಮಾಡಲಿಕ್ಕೆ ಮತ್ತೆ ತೇರದಾಳಕ್ಕೆ ಬರಬೇಕು. ಇದು ಸುಮಾರು 2ವರ್ಷಗಳಿಂದ ಜನಸಾಮಾನ್ಯರ ಪರದಾಟಕ್ಕೆ ಕಾರಣವಾಗಿದೆ. ಇದರಿಂದ ಜನರಿಗೆ ನಗುವುದೋ, ಅಳುವುದೋ, ನೀವೇ ಹೇಳಿ ಎನ್ನುವಂತಾಗಿ ಈ ಗೊಂದಲ ಗೂಡಿಗೆ ಜನಪ್ರತಿನಿಧಿಗಳು ಶೀಘ್ರದಲ್ಲಿ ಉತ್ತರ ನೀಡಬೇಕಾಗಿದೆ ಎಂದರು.
ಮಹಾಲಿಂಗಪುರ ತಾಲೂಕು ಸ್ಥಳವಾಗುವವರೆಗೆ ಮುಧೋಳ ಅಥವಾ ರಬಕವಿ ಬನಹಟ್ಟಿ ತಾಲೂಕುಗಳಲ್ಲಿಯೇ ಮುಂದುವರೆಯಲಿ ಎನ್ನುವುದು ಸರ್ವಜನರ ಮಾತು.
ನಾಲ್ಕು ದಶಕಗಳ ಹಿಂದೆಯೇ ತಾಲೂಕು ಹೋರಾಟ ನಡೆಯುತ್ತಿದ್ದು, 2004ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರವಿದ್ದಾಗ ಮತ್ತೆ ಮರುಜೀವ ಪಡೆದುಕೊಂಡು ನಗರದ ಬಸವೇಶ್ವರ ವೃತ್ತದಲ್ಲಿ ತಿಂಗಳುಗಟ್ಟಲೆ ಸಾರ್ವಜನಿಕರ ಧರಣಿ ಸತ್ಯಾಗ್ರಹ ನಡೆಯಿತು. ಬಾಬುರಾವ ತುಂಗಳವರ ಮೊಸಳೆ ಕಣ್ಣೀರಿಗೆ ನಾವೆಲ್ಲ ಮರುಳಾಗಿ ಧರಣಿ ಬಿಡಬೇಕಾಗಿ ಬಂದಿರುವುದು ಇತಿಹಾಸ.
2008ರ ಜಗದೀಶ ಶೆಟ್ಟರ್ ಸಿ.ಎಂ ಕಾಲದಲ್ಲಿ ರಬಕವಿ-ಬನಹಟ್ಟಿ ತಾಲೂಕು ಘೋಷಣೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ. ಇವುಗಳಿಗೆಲ್ಲ ನಗರದ ಜನತೆ ಸ್ವಾಗತ ಕೋರುತ್ತಾರೆ ಎರಡು ಮಾತಿಲ್ಲ.
ಆದರೆ ಮಹಾಲಿಂಗಪುರ ಎಲ್ಲವನ್ನೂ ಹೊಂದಿ ತಾಲೂಕು ಕೇಂದ್ರ ಮಾಡಲು ಸರ್ಕಾರಗಳು ವಿಳಂಬ ನೀತಿಯನ್ನೇಕೆ ಅನುಸರಿಸುತ್ತಿವೆ ? ನಾವು ಕೇವಲ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಆಗಿ ಕೆಲಸ ಮಾಡಬೇಕೆ ?
ನಗರದ ಜನತೆ ಮುಗ್ಧರು ಇದನ್ನೇ ತಾವು ಅಸ್ತ್ರವನ್ನಾಗಿ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಈ ರಾಜಕೀಯ ಪಕ್ಷಗಳಿಗೆ ಬುದ್ಧಿಯನ್ನು ಕಲಿಸುವಷ್ಟು ವಿದ್ಯೆಯೂ ಇವರಲ್ಲಿದೆ ಇದನ್ನು ಮರೆಯಬಾರದು ಎಂದು ಖಾರವಾಗಿ ನುಡಿದರು.
ಸಿಎಂ ಕುಮಾರಸ್ವಾಮಿ ಬಳಿ ಹೋರಾಟ ಸಮಿತಿಯ ಜೊತೆ 2ಬಾರಿ ಸರ್ವಪಕ್ಷ ನಿಯೋಗ ಹೋದ ಸಂದರ್ಭದಲ್ಲಿ ಅವರು ಭರವಸೆಯನ್ನು ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ನಗರದ ದುರಾದೃಷ್ಟವೇನೋ ತಿಂಗಳ ನಂತರದಲ್ಲಿ ಸಮ್ಮಿಶ್ರ ಸರಕಾರವೇ ಪತನಗೊಂಡಿತು.
ಮುಂದಿನ ಬೆಳವಣಿಗೆಯಲ್ಲಿ ಈಗಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ಸರಕಾರ ಅಧಿಕಾರಕ್ಕೆ ಬಂದ 25ದಿನಗಳಲ್ಲಿಯೇ ಮಹಾಲಿಂಗಪುರ ತಾಲೂಕು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ 2ವರ್ಷಗಳು ಕಳೆದಿವೆ ಅವರು ಮಹಾಲಿಂಗಪುರ ತಾಲೂಕು ರಚನೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವರು ಕೊಟ್ಟ ಮಾತಿನಂತೆ ನಡೆದು ಇಲ್ಲಿನ ಜನತೆಯ ಋಣ ತೀರಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.
ಮೊದಲು ಮುಧೋಳ ತಾಲೂಕಿನಲ್ಲಿದ್ದ ಮಹಾಲಿಂಗಪುರ ಭಾಗದ ಹತ್ತಾರು ಹಳ್ಳಿಗಳ ಜನ ನೂತನ ರಬಕವಿ ಬನಹಟ್ಟಿ ತಾಲೂಕಿಗೇ ಇನ್ನೂ ಹೊಂದಿಕೊಳ್ಳಲಾಗುತ್ತಿಲ್ಲ. ಅಂಥದ್ದರಲ್ಲಿ ನೂತನ ತೇರದಾಳ ತಾಲೂಕಿಗೆ ಈ ಭಾಗದ ಹಳ್ಳಿಗಳನ್ನು ಸೇರಿಸಿಕೊಳ್ಳುವ ಯತ್ನವೂ ನಡೆದಿದೆ.
ಆದ್ದರಿಂದ ಈ ಬಗ್ಗೆ ತಾಲೂಕು ಹೋರಾಟ ಸಮಿತಿ ಊರು ಕೊಳ್ಳೆ ಹೊಡೆದ ನಂತರ ದಿಡ್ಡಿ ಬಾಗಿಲು ಹಾಕಿದಂತೆ ಆಗಬಾರದು ಜಾಗೃತಗೊಳ್ಳುವುದು ಸೂಕ್ತವೆಂದು ತೇರದಾಳ ಮತಕ್ಷೇತ್ರದ ಜೆಡಿಎಸ್ ಧುರೀಣ ನಿಂಗಪ್ಪ ಬಾಳಿಕಾಯಿ ಹೋರಾಟಕ್ಕೆ ಅಣಿಯಾಗಲು ಒತ್ತಾಯಿಸಿದ್ದಾರೆ.