ನನ್ನಿಷ್ಟದ ನಟಿ ಜಯಂತಿಯವರ ನಿಧನ ಅತೀವ ದುಃಖತಂದಿದೆ; ಸಿದ್ದರಾಮಯ್ಯ ಸಂತಾಪ
ಬೆಂಗಳೂರು, ಜುಲೈ 26 ಹಿರಿಯ ಪಂಚಭಾಷಾ ತಾರೆ, ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ರಾಜ್ಯದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಹಾಗೂ ತಮ್ಮ ಇಷ್ಟದ ನಟಿ ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖ ವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.
ಜಯಂತಿ ಅವರು ಅಭಿನಯಿಸಿರುವ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮಾರರಾಗಿರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ಜೆಡಿ(ಎಸ್) ಹಿರಿಯನಾಯಕ ಹೆಚ್ ಡಿ ಕುಮಾಎಸ್ವಾಮಿ ಅವರೂ ಜಯಂತಿ ಅವರ ನಿಧನ ಶೋಕ ವ್ಯಕ್ತಪಡಿಸಿದ್ದು, 'ಅಭಿನಯ ಶಾರದೆ' ಜಯಂತಿ ಅವರು ನಿಧನರಾದ ಸಂಗತಿ ಬೇಸರ ತರಿಸಿದೆ.
ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡಿಗರೆಂಬುದೇ ನಮ್ಮ ಹೆಮ್ಮೆ. ಅವರಿಗೆ ಸದ್ಗತಿ ದೊರೆಯಲಿ.ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಸಂತಾಪ ಸೂಚಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಕನ್ನಡದ ಮೇರುನಟಿ ಜಯಂತಿಯವರ ನಿಧನದಿಂದಾಗಿ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ವಿಭಿನ್ನ ಹಾಗೂ ಸವಾಲಿನ ಪಾತ್ರಗಳ ಮೂಲಕ ಜನಮಾನಸದಲ್ಲಿ ಛಾಪೊತ್ತಿದ ಕಲಾವಿದೆ ಜಯಂತಿಯವರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಕುಟುಂಬವರ್ಗಕ್ಕೆ ಸಾಂತ್ವನ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.