ಕನ್ನಡ ಸಾರಸ್ವತ ಲೋಕಕ್ಕೆ ತಾಲೂಕಿನ ಕವಿಗಳ ಕೊಡುಗೆ ಅನನ್ಯ
ಶಾಸಕ ಮಹಾದೇವಪ್ಪ ಯಾದವಾಡ ಹೇಳಿಕೆ: 8 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟಿಸಿ
ರಾಮದುರ್ಗ 9: ತಾಲೂಕಿನ ಸಾಹಿತಿಗಳಾದ ಸಾಲಿ ರಾಮಚಂದ್ರಯ, ಡಿ.ಎಸ್. ಕರ್ಕಿ, ಬಿ.ಸಿ. ದೇಸಾಯಿ ಹಾಗೂ ಹುಲಕುಂದ ಜಾನಪದದ ಭೀಮಕವಿಗಳು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಅವರ ಕೃತಿಗಳನ್ನು ಇಂದಿನ ಯುವಜನತೆಗೆ ಪರಿಚಯಿಸಿ ಸಾಹಿತ್ಯಾಸಕ್ತಿ ಹೆಚ್ಚಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.
ತಾಲೂಕಿನ ಹುಲಕುಂದ ಗ್ರಾಮದಲ್ಲಿ ಏರ್ಪಡಿಸಿದ ನೇ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಇದೆ, ಹಾಗೂ ಸುಮಾರು 8 ಜ್ಞಾನ ಪೀಠಗಳು ಕನ್ನಡ ಸಾಹಿತ್ಯಕ್ಕೆ ದೊರಕಿದ್ದು ನಮ್ಮ ಹೆಮ್ಮೆ ಎಂದು ಬಣ್ಣಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಕನ್ನಡಿಗರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವುದು ಮೂರ್ಖತನದ ಪರಮಾವಧಿ. ಬೆಳಗಾವಿ ರಾಜ್ಯದ 2 ನೇ ರಾಜಧಾನಿಯಾಗಲಿದೆ ಎಂದು ಭರವಸೆ ನೀಡಿ, ಮಹಾಜನ ವರದಿಯ ಪ್ರಕಾರ ಕೊಲ್ಲಾಪೂರ, ಸೊಲ್ಲಾಪೂರದ ಭಾಗಗಳು ಕರ್ನಾಟಕಕ್ಕೆ ಸೇರಿದ್ದವು ಎಂಬುದನ್ನು ಠಾಕ್ರೆ ಅರಿಯಬೇಕು ಎಂದು ಎಚ್ಚರಿಸಿದರು. ತಾಲೂಕಿನಲ್ಲಿ ಡಿ ಎಸ್ ಕರ್ಕಿಯವರ ಭವ್ಯ ಸ್ಮಾರಕ ನಿರ್ಮಿಸಲು ರೂ. 10 ಲಕ್ಷ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮಟಗುಡ್ಡ ಹರ್ಷವ್ಯಕ್ತಪಡಿಸಿದರು. ರಾಜೋತ್ಸವ ಪ್ರಶಸ್ತಿ ಪುರಸ್ಕೃತ ತಾಲೂಕಿನ ಸುರೇಬಾನ-ಮನಿಹಾಳ ಗ್ರಾಮದ ರಾಮಣ್ಣ ಬ್ಯಾಟಿ ಅವರನ್ನು ಸನ್ಮಾನಿಸಲಾಯಿತು. ಚಿಪ್ಪಲಕಟ್ಟಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ ಹಾಗೂ ಗೋಕಾಕ ಮರಡಿಮಠದ ಅದೃಶ್ಯ ಪವಾಡೇಶ್ವರ ಮಹಾಸ್ವಾಮಿಜಿಗಳು ಸಾನಿಧ್ಯವಹಿಸಿದ್ದರು. ಡಾ.ರಾಜೇಂದ್ರ ಅಣ್ಣಾಣವರ ಸಮ್ಮೆಳದ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ. ಕಲ್ಯಾಣಮ್ಮ ಲಂಗೋಟಿ, ಜಿಪಂ ಸದಸ್ಯ ರಮೇಶ ದೇಶಪಾಂಡೆ, ಗೋಪಾಲ ದಾನಶೆಟ್ಟ, ರಮೇಶ ಅಣ್ಣಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.