ಚಿಮ್ಮಡ ಗ್ರಾಮದ ರಘುನಾಥಪ್ರಿಯ ಸಾಧು ಮಹಾರಾಜರ ರಥೋತ್ಸವ
ಮಹಾಲಿಂಗಪುರ : ಸಮೀಪದ ಚಿಮ್ಮಡ ಗ್ರಾಮದ ರಘುನಾಥಪ್ರಿಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವ ನ.9 ಮಂಗಳವಾರದಿಂದ ಎರಡು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ನಡೆಯಲಿದೆ.
ಮಂಗಳವಾರ ಮುಂಜಾನೆ 6 ಘಂ.ಗೆ ನಡೆಯುವ ವಿಶೇಷ ಪೂಜೆಯೊಂದಿಗೆ ಆರಂಭಗೊಳ್ಳಲಿರುವ ಜಾತ್ರಾ ಮಹೋತ್ಸವದಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ ಮಹಾಪ್ರಸಾದ ಮತ್ತು ಸಂಜೆ 5 ಘಂ.ಗೆ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಮಹಾರಾಷ್ಟ್ರದ ಭಕ್ತವೃಂದದಿಂದ ಪಾರಾಯಣ, ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಮಠದ ತೀರ್ಥ ಭಾವಿಯಲ್ಲಿ ರಥ ಎಳೆಯುವ ಕಾರ್ಯಕ್ರಮವೂ ಜರುಗಲಿದೆ.
ಗ್ರಾಮದ ಬಸವೇಶ್ವರ ಯುವಕ ಮಂಡಳ ಹಾಗೂ ಗೆಳೆಯರ ಬಳಗದ ಸಹಯೋಗದಲ್ಲಿ ಜಾತ್ರೆ ಹಾಗೂ ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಪ್ರಸಿದ್ದ ಕಲಾವಿದರ ಆರ್ಕೆಸ್ಟ್ರಾ ತಂಡದಿಂದ ಸಂಗೀತ ಸಂಜೆ, ಸುಮಧುರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಬುಧವಾರ ಮುಂಜಾನೆ 9 ಗಂಟೆಗೆ ಜೈ ಹನುಮಾನ ಶಾಲೆಯ ಆವರಣ ಹಾಗೂ ಕನ್ನಡ ಗಂಡು ಮಕ್ಕಳ ಶಾಲೆ ಹತ್ತಿರ ಓಟದ ಸ್ಪರ್ಧೆ ಹಾಗೂ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿದ್ದು ವಿಜೇತ ಐವರು ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ಈ ಎಲ್ಲ ಕಾರ್ಯಕ್ರಮಗಳ ಸಾನಿಧ್ಯವನ್ನು ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು ವಹಿಸಲಿದ್ದಾರೆ,
ಮುಖ್ಯ ಅಥಿತಿಗಳಾಗಿ ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕಿ ಉಮಾಶ್ರೀ, ಡಾ. ಎ.ಆರ್. ಬೆಳಗಲಿ, ಗ್ರಾ.ಪಂ.ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಾ ಮಾಯಣ್ಣವರ, ರಾಜೇಂದ್ರ ಭದ್ರಣ್ಣವರ, ಸಿದ್ದು ಕೊಣ್ಣೂರ, ಪ್ರಮುಖರಾದ ಎಸ್.ಎ. ಪಾಟೀಲ, ರಾಮಣ್ಣ ಮುಗಳಖೋಡ, ರಾಮಪ್ಪ ಬಗನಾಳ, ಬಿ.ಎಸ್. ಪಾಟೀಲ, ಡಾ.ಪದ್ಮಜಿತ ನಾಡಗೌಡಪಾಟೀಲ, ರಮೇಶ ಕೆಸರಗೊಪ್ಪ, ಡಾ. ಶ್ರೀಶೈಲ ಧಡೂತಿ, ಶಂಕರ ಬಟಕುರ್ಕಿ, ಸೇರಿದಂತೆ ಗ್ರಾಮ ಪಂಚಾಯತಿ ಹಾಗೂ ಪಿಕೆಪಿಎಸ್ ಬ್ಯಾಂಕ್ ಆಡಳಿತ ಮಂಡಳಿ, ಸದಸ್ಯರು ಸೇರಿದಂತೆ ಇನ್ನೂ ಅನೇಕ ಗಣ್ಯ ಮಾನ್ಯರು ಆಗಮಿಸಲಿದ್ದಾರೆ.