ಕಲ್ಯಾಣ ಕರ್ನಾಟಕದ ಸವಾಂರ್ಗೀಣ ಅಭಿವೃದ್ಧಿ ಹಾಗೂ ಜನರ ಏಳಿಗೆಯೇ ಸರ್ಕಾರದ ಮಹಾ ಸಂಕಲ್ಪ: ಸಚಿವ ಟಿ. ರಘುಮೂರ್ತಿ
ಲೋಕದರ್ಶನ ವರದಿ
ಬಳ್ಳಾರಿ,ಸೆ.17 : ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಸವಾಂರ್ಗೀಣ ಪ್ರಗತಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ನಮ್ಮ ಸರ್ಕಾರದ ಅಚಲ ಸಂಕಲ್ಪವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಅವರು ಹೇಳಿದರು. ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿಪೂರ್ವ (ಮಾ.ಪು) ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1947ರ ಆಗಸ್ಟ್ 15ರಂದು ಇಡೀ ಭಾರತಕ್ಕೆ ಸ್ವಾತಂತ್ರ್ಯ ಬಂದರೂ, ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿ ಸ್ವತಂತ್ರವಾಗಿರಲು ನಿರ್ಧರಿಸಿದ್ದರಿಂದ ಕಲ್ಯಾಣ ಕರ್ನಾಟಕದ ಆಗಿನ ಕಲ್ಬುರ್ಗಿ, ಬೀದರ್, ರಾಯಚೂರು ಸೇರಿದಂತೆ ಇಂದಿನ ಏಳು ಜಿಲ್ಲೆಗಳಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಕಾಸಿಂ ರಜ್ವಿ ನೇತೃತ್ವದ ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಟಗಾರರು ರಣಕಹಳೆ ಊದಿದರು. ಅಂತಿಮವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರ ದಿಟ್ಟ ನಿರ್ಧಾರದ ಫಲವಾಗಿ ನಡೆದ ಐದು ದಿನಗಳ ಸೈನಿಕ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ಈ ಭಾಗಕ್ಕೆ ಮುಕ್ತಿ ದೊರೆಯಿತು. ಈ ಐತಿಹಾಸಿಕ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.