ದೇಶದಲ್ಲಿ ಆರ್‌ ಫ್ಯಾಕ್ಟರ್‌ ಹೆಚ್ಚುತ್ತಿದೆ; ಕೇಂದ್ರ ಕಳವಳ

ದೇಶದಲ್ಲಿ  ಆರ್‌  ಫ್ಯಾಕ್ಟರ್‌   ಹೆಚ್ಚುತ್ತಿದೆ; ಕೇಂದ್ರ  ಕಳವಳ

ನವದೆಹಲಿ, ಆಗಸ್ಟ್‌  4 - ದೇಶದಲ್ಲಿ  ಕೊರೊನಾ  ಸೋಂಕು  ಪ್ರಸರಣವನ್ನು  ಸೂಚಿಸುವ   ಆರ್   ಫ್ಯಾಕ್ಟರ್‌  ( ರಿ ಪ್ರೊಡಕ್ಟಿವ್‌  ನಂಬರ್) ಹೆಚ್ಚುತ್ತಿರುವ ‌ ಬಗ್ಗೆ ಕೇಂದ್ರ ಸರ್ಕಾರ  ಕಳವಳ ವ್ಯಕ್ತಪಡಿಸಿದೆ. ತಮಿಳುನಾಡು, ಕೇರಳ, ಹಿಮಾಚಲ ಪ್ರದೇಶ  ಹಾಗೂ  ಕಾಶ್ಮೀರ ಸೇರಿದಂತೆ  ಎಂಟು ರಾಜ್ಯಗಳಲ್ಲಿ   ಆರ್‌  ಫ್ಯಾಕ್ಟರ್‌  ಒಂದಕ್ಕಿಂತ ಹೆಚ್ಚಿದೆ   ಎಂದು  ತಿಳಿಸಿದೆ.   


ಕೋವಿಡ್‌  ಸೋಂಕಿತ  ವ್ಯಕ್ತಿ   ಸರಾಸರಿ   ಎಷ್ಟು  ಮಂದಿಗೆ   ಸೋಂಕು  ಹರಡಬಹುದು   ಎಂಬುದನ್ನು  ವೈದ್ಯಕೀಯ ಪರಿಭಾಷೆಯಲ್ಲಿ ಆರ್   ಫ್ಯಾಕ್ಟರ್‌  ಎಂದು ಕರೆಯುತ್ತಾರೆ.   ಆರ್ ಫ್ಯಾಕ್ಟರ್ ಒಂದಕ್ಕಿಂತ ಕಡಿಮೆ ಇದ್ದರೆ, ಕೊರೊನಾ  ಹರಡುವಿಕೆ ಕಡಿಮೆಯಿದೆಯೆಂದು,  ಒಂದಕ್ಕಿಂತ ಹೆಚ್ಚು ದಾಖಲಾದರೆ  ಸೋಂಕಿನ ಹರಡುವಿಕೆ  ತೀವ್ರವಾಗಿದೆ   ಎಂದು ಅರ್ಥ .    ದೇಶದ  ಹಲವು  ರಾಜ್ಯಗಳಲ್ಲಿ  ಆರ್ ಫ್ಯಾಕ್ಟರ್ ಹೆಚ್ಚುತ್ತಿರುವುದರಿಂದ  ಕಠಿಣ   ಕ್ರಮಗಳನ್ನು  ಕೈಗೊಳ್ಳುವಂತೆ  ಕೇಂದ್ರ,   ಈಗಾಗಲೇ  ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ದೇಶದಲ್ಲಿ ಎರಡನೇ ಅಲೆ  ಇನ್ನೂ ಮುಗಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.   ಪ್ರಪಂಚದಾದ್ಯಂತ  ಪ್ರತಿದಿನ 4.7  ಲಕ್ಷಕ್ಕೂ ಹೆಚ್ಚು  ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ.  ಭಾರತದ  44 ಜಿಲ್ಲೆಗಳಲ್ಲಿ   ವಾರಾಂತ್ಯದ   ಪಾಸಿಟಿವಿಟಿ  ದರವು ಶೇ 10 ಕ್ಕಿಂತ  ಹೆಚ್ಚು ವರದಿಯಾಗುತ್ತಿದೆ  ಎಂದು  ಕೇಂದ್ರ ಹೇಳಿದೆ.


 ಮತ್ತೊಂದೆಡೆ, ಕಳೆದ ನಾಲ್ಕು ವಾರಗಳಲ್ಲಿ ಕೇರಳ, ಮಹಾರಾಷ್ಟ್ರ, ಮಣಿಪುರ  ಹಾಗೂ  ಅರುಣಾಚಲ ಪ್ರದೇಶದ 18 ಜಿಲ್ಲೆಗಳಲ್ಲಿ  ಕೊರೊನಾ   ಪ್ರಕರಣಗಳ ಏರಿಕೆಯು ಆತಂಕಕಾರಿಯಾಗಿದೆ ಎಂದು ಹೇಳಿದೆ.  ಕಳೆದ ವಾರ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ಪ್ರಕರಣಗಳು ಕೇರಳದಲ್ಲಿಯೇ ವರದಿಯಾಗಿವೆ.
42,625 ಜನರಿಗೆ  ಕೊರೊನಾ  ಪಾಸಿಟಿವ್
ದೇಶದಾದ್ಯಂತ,   ಬುಧವಾರದಂದು  ಲಭ್ಯವಾಗಿರುವ  ಅಂಕಿ ಅಂಶಗಳ  ಪ್ರಕಾರ  42,625  ಮಂದಿಗೆ  ಕೊರೊನಾ  ಪಾಸಿಟಿವ್‌   ವರದಿಯಾಗಿದೆ.  ಇದರಿಂದ  ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ  3,17,69,132 ಕ್ಕೆ  ತಲುಪಿದೆ  ಎಂದು ಕೇಂದ್ರ ಹೇಳಿದೆ.  ಸಾಂಕ್ರಾಮಿಕ ರೋಗದಿಂದ  ಕಳೆದ  24 ಗಂಟೆಗಳಲ್ಲಿ 562  ಮಂದಿ  ಸಾವನ್ನಪ್ಪಿದ್ದು,  ಒಟ್ಟು ಸಾವಿನ ಸಂಖ್ಯೆ 4,25,757 ಕ್ಕೆ ಏರಿಕೆಯಾಗಿದೆ  ಎಂದು  ಕೇಂದರ ಆರೋಗ್ಯ ಸಚಿವಾಲಯ  ಹೇಳಿದೆ.

ಸುದ್ದಿ ಓದಿ