ಪೈಗಂಬರರ ಸಂದೇಶಗಳು ಮಾನವಕುಲಕ್ಕೆ ಮಾದರಿ
ಲೋಕದರ್ಶನ ವರದಿ
ಮಹಾಲಿಂಗಪುರ 26 : ಇಸ್ಲಾಂ ಧರ್ಮದ ಸಂಸ್ಥಾಪಕ ಹಾಗೂ ಧರ್ಮಗುರು ಹಜರತ್ ಮಹಮ್ಮದ್ ಪೈಗಂಬರರ ಸಂದೇಶಗಳು ಸಕಲ ಮಾನವಕುಲಕ್ಕೆ ಮಾದರಿಯಾಗಿವೆ ಎಂದು ಜಮಾಅತ್ ಮೌಲಾನಾ ಮಾಹೀರುಲ್ ಖಾದ್ರಿ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಾಮಿಯಾ ಮಸೀದಿ ಜಮಾಅತ್ ಆಯೋಜಿಸಿದ್ದ ಈದ್ ಮಿಲಾದ್ ಅಂಗವಾಗಿ ನಡೆದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೈಗಂಬರರು ಮಾನವಕುಲಕ್ಕೆ ಶಾಂತಿ, ಪ್ರೀತಿ, ದಯೆ, ಸಹಾನುಭೂತಿ, ಸಹೋದರತ್ವ ಹಾಗೂ ಕ್ಷಮೆಯ ಸಂದೇಶ ಸಾರಿದ ಮಹಾನ್ ದೇವದೂತರು ಎಂದು ಹೇಳಿದರು.
ಜಾಮಿಯಾ ಮಸೀದಿ ಜಮಾಅತ್ ಅಧ್ಯಕ್ಷ ಪಾರುಖ್ ಪಕಾಲಿ ಮಾತನಾಡಿ, ಪೈಗಂಬರರ ಜೀವನವು ಮಾನವೀಯತೆಯೇ ಎಲ್ಲ ಧರ್ಮಗಳಿಗಿಂತ ಶ್ರೇಷ್ಠ ಮೌಲ್ಯ ಎಂಬುದನ್ನು ಸಾರುತ್ತದೆ. ವ್ಯಕ್ತಿಯ ಸ್ಥಾನಮಾನ, ಸಂಪತ್ತು, ಜನಾಂಗ ಹಾಗೂ ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಗೌರವಿಸಬೇಕು ಎಂಬುದು ಅವರ ಬೋಧನೆಯಾಗಿದೆ ಎಂದರು.
ಅಂಜುಮನ್ ಕಮಿಟಿ ಅಧ್ಯಕ್ಷ ಸಜ್ಜನಸಾಬ್ ಪೆಂಡಾರಿ ಮಾತನಾಡಿ, ಪೈಗಂಬರರ ಮಾನವೀಯ ಸಂದೇಶಗಳು ಸಮಾಜಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ದಾರೀದೀಪವಾಗಿವೆ. ಬಡವರು ಹಾಗೂ ನಿರ್ಗತಿಕರಿಗೆ ದಾನ ಮಾಡುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗಬಹುದು ಎಂದರು.
ಸರ್ಕಾರಿ ಪ್ರೌಢಶಾಲೆಯ ಗಾಂಧಿ ಕ್ರೀಡಾಂಗಣದಿಂದ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮೆರವಣಿಗೆಯು ಚೆನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ್, ನಡುಚೌಕಿ, ಜೋಳದ ಬಜಾರ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಪುರಸಭೆ ಮಾರ್ಗವಾಗಿ ಟಿಪ್ಪು ಸುಲ್ತಾನ್ ಮೊಹಲ್ಲಾದ ಜಾಮಿಯಾ ಮಸೀದಿ ತಲುಪಿತು. ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ, ಬಸವರಾಜ ರಾಯರ, ರೈತ ಸಂಘದ ಮುಖಂಡ ಗಂಗಾಧರ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.