ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸಿದ ಮುಖ್ಯಶಿಕ್ಷಕರ ಸೇವಾ ಮನೋಭಾವ
ಲೋಕದರ್ಶನ ವರದಿ
ಮಹಾಲಿಂಗಪುರ, ಜು.10: ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ಬದ್ಧತೆ ಮತ್ತು ಸೇವಾ ಮನೋಭಾವವೇ ಪ್ರಮುಖ ಶಕ್ತಿಯಾಗಿದೆ ಎಂಬುದಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಬಸವೇಶ್ವರ ನಗರದ ಇಟ್ನಾಳ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಯಮನೂರ ಲಮಾಣಿ ಅವರ ಕಾರ್ಯವೇ ಜೀವಂತ ಸಾಕ್ಷಿಯಾಗಿದೆ.
ಒಂದರಿಂದ ಐದನೇ ತರಗತಿವರೆಗೆ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ ಸರ್ಕಾರದ ಬಿಸಿಯೂಟದ ಜೊತೆಗೆ ಪ್ರತಿದಿನ ತಮ್ಮ ಸ್ವಂತ ವೆಚ್ಚದಲ್ಲಿ ಮೊಳಕೆ ಒಡೆದ ಕಾಳುಗಳು ಹಾಗೂ ರಾಗಿ ಅಂಬಲಿಯನ್ನು ತಯಾರಿಸಿ ಮಕ್ಕಳಿಗೆ ವಿತರಿಸುತ್ತಿದ್ದಾರೆ. ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು, ಆರೋಗ್ಯ ಕಾಪಾಡುವುದು ಹಾಗೂ ಶಾಲೆಯ ಮೇಲಿನ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹಲವು ವರ್ಷಗಳಿಂದ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಶೈಕ್ಷಣಿಕ ಚಟುವಟಿಕೆಗಳಿಗೂ ವಿಶೇಷ ಒತ್ತು ನೀಡಿರುವ ಅವರು, ಪ್ರತಿ ವಾರ ಹಾಡುಗಾರಿಕೆ, ರಾಷ್ಟ್ರಗೀತೆ, ದೇಶಭಕ್ತಿಗೀತೆ, ಭಕ್ತಿಗೀತೆ, ರಂಗೋಲಿ, ಚಿತ್ರಕಲೆ, ಸಂಸ್ಕೃತ ಕಥೆ ಹೇಳುವಿಕೆ, ಕನ್ನಡ ಮತ್ತು ಇಂಗ್ಲಿಷ್ ಓದು-ಬರಹ ಸೇರಿದಂತೆ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ. ಸ್ಪರ್ಧೆಗಳಲ್ಲಿ ವಿಜೇತರಾಗುವ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದಲೇ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಇದರ ಜೊತೆಗೆ ಸಹಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯ ಕಟ್ಟಡಕ್ಕೆ ಹಸಿರು ಬಣ್ಣ ಬಳಿಸಿ ಆಕರ್ಷಕ ರೂಪ ನೀಡಲಾಗಿದೆ. ಸ್ವಚ್ಛ ಹಾಗೂ ಸುಂದರ ಶಾಲಾ ವಾತಾವರಣ, ಗುಣಮಟ್ಟದ ಬೋಧನೆ ಮತ್ತು ಮಕ್ಕಳ ಮೇಲಿನ ವಿಶೇಷ ಕಾಳಜಿಯಿಂದ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಶಾಲೆಯ ಮೇಲಿನ ಜನರ ವಿಶ್ವಾಸವೂ ಗಟ್ಟಿಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳು, ಮಕ್ಕಳ ಕಲಿಕಾ ಮಟ್ಟ ಹಾಗೂ ಶಾಲೆಯ ನಿರ್ವಹಣೆಯನ್ನು ಪರೀಶೀಲಿಸಿ, ಸಂಗಾನಟ್ಟಿ ಶಾಲೆಯನ್ನು ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲೊಂದು ಎಂದು ಪ್ರಶಂಸಿಸಿದ್ದಾರೆ.