ಕಾಂಗ್ರೆಸ್ ಪಕ್ಷವೆಂದರೆ ಎಲ್ಲರನ್ನೂ ಸಮಾನ ದೃಷ್ಟಿ,ಗೌರವದಿಂದ ಕಾಣುವ ಪಕ್ಷ: ಬೆಳಗಲಿ
ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಮುಖಂಡರಿಂದ ನೋಂದಣಿ ಅಭಿಯಾನಕ್ಕೆ ಸಾಂಕೇತಿಕ ಚಾಲನೆ
ಮಹಾಲಿಂಗಪುರ 11: ಕಾಂಗ್ರೆಸ್ ಪಕ್ಷವೆಂದರೆ ಎಲ್ಲರನ್ನೂ ಸಮಾನ ದೃಷ್ಟಿ ಮತ್ತು ಗೌರವದಿಂದ ಕಾಣುವ ಪಕ್ಷವೆಂದು ಖ್ಯಾತ ವೈದ್ಯರೂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರೂ ಆದ ಡಾ. ಎ.ಆರ್. ಬೆಳಗಲಿ ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ತೇರದಾಳ ಮತಕ್ಷೇತ್ರದ, ರಬಕವಿ-ಬನಹಟ್ಟಿ ತಾಲೂಕ ಹಾಗೂ ಮಹಾಲಿಂಗಪುರ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ, ಶನಿವಾರ ಮಾದರ ಚೆನ್ನಯ್ಯ ಭವನದಲ್ಲಿ ಹಮ್ಮಿಕೊಂಡ, ನೂತನ ಸದಸ್ಯತ್ವ ಅಭಿಯಾನದ ಸಾಂಕೇತಿಕ ಚಾಲನೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂವಿಧಾನದ ಪ್ರತಿರೂಪದಂತೆ ದೇಶದಲ್ಲಿ ಇತರೆ ಪಕ್ಷಗಳಿಗಿಂತಲೂ ಕಾಂಗ್ರೆಸ್ ಪಕ್ಷ ಒಂದು ವಿಶಿಷ್ಟವಾದ ಸ್ಥಾನ ಪಡೆದಿದೆ. ಏಕೆಂದರೆ ದೇಶದ ಪ್ರತಿಯೊಬ್ಬರನ್ನೂ ಸಮಾನ ದೃಷ್ಟಿಯಿಂದ ನೋಡುವ ಅಲ್ಲದೆ ಎಲ್ಲ ಸಮುದಾಯಗಳ ಅಭಿವೃದ್ಧಿ ಬಯಸುವ ಪಕ್ಷವಾಗಿದೆ ಆದ್ದರಿಂದ ಪಕ್ಷ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುವಂತಹರನ್ನು ಸದಸ್ಯರನ್ನಾಗಿ ಮಾಡಿಕೊಳ್ಳೋಣ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಶ್ರೀಪಾದ ಗುಂಡಾ ಹಾಗೂ ಪುರಸಭಾ ಸದಸ್ಯ ಜಾವೇದ್ ಭಾಗವಾನ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಾ ನಂತರ ಖಾಲಿ ಇದ್ದ ದೇಶವನ್ನು ನೂರಾರು ಡ್ಯಾಂಗಳನ್ನು ಕಟ್ಟಿ, ಹಸಿರು ಕ್ರಾಂತಿ ಮೂಲಕ ರೈತರ ಹಾಗೂ ದೇಶದ ಸಮೃದ್ಧಿಯ ಜೊತೆಗೆ ಜನತೆಯ ನೆಮ್ಮದಿಯ ಬಾಳಿಗೆ ಕಾರಣೀಭೂತವಾಗಿದ್ದಲ್ಲದೆ ಹೊರದೇಶಗಳಿಗೆ ಆಹಾರಧಾನ್ಯಗಳನ್ನೂ ರಫ್ತು ಮಾಡುತ್ತಿದೆ. ರಾಜ್ಯದ ಎಲ್ಲ ವರ್ಗಗಳಿಗೆ ಭಾಗ್ಯಗಳನ್ನು ನೀಡಿದ ಹಾಗೂ ಐಟಿಬಿಟಿ ತಂತ್ರಜ್ಞಾನ ತಂದಿರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ.. ದೇಶ ಹಾಗೂ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಲೆ ಇರುವುದರಿಂದ ನಾವೆಲ್ಲರೂ ಈಗಿನಿಂದಲೇ ವರಿಷ್ಠರ ನಿರ್ಧಾರದಂತೆ ಪಕ್ಷಕ್ಕೆ ಉತ್ತಮ ಸದಸ್ಯರನ್ನು ಸೇರೆ್ಡಗೊಳಿಸಿಕೊಂಡು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕ ಸಿದ್ದು ಕೊಣ್ಣೂರ ಮಾತನಾಡಿ, ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಕ್ಷೇತ್ರಾದ್ಯಂತ ಬೂತ್ ಮಟ್ಟದಲ್ಲಿ ಉತ್ತಮ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಮತ್ತು ನಮ್ಮ ನಮ್ಮಲ್ಲಿರುವ ವೈಮನಸ್ಸುಗಳನ್ನು ಬದಿಗಿರಿಸಿ ಪಕ್ಷ ಸಂಘಟನೆ ಮಾಡಬೇಕು ಎಂದು ನಾಯಕರಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಘಟ್ನಟ್ಟಿ, ಯಲ್ಲನಗೌಡ ಪಾಟೀಲ್, ಬಸವರಾಜ ರಾಯರ, ಮಹಾಲಿಂಗಪ್ಪ ತಟ್ಟಿಮನಿ, ಮುಸ್ತಾಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಬಸವರಾಜ್ ಬುರುಡ, ರಾಜು ಗೌಡಪ್ಪಗೋಳ, ಮಹಾಲಿಂಗಪ್ಪ ಲಾತೂರ, ಸಯ್ಯದ ಯಾದವಾಡ, ಲಕ್ಷ್ಮಣ ಮಾಂಗ, ಅರ್ಜುನ ದೊಡಮನಿ, ಮಹಾಲಿಂಗ ಮಾಳಿ, ಸಿದ್ದು ಬೂಸನ್ನವರ್, ಸುರೇಶ ಜಾಧವ, ನಜೀರ ಅತ್ತಾರ, ಶಶಿಕಾಂತ್ ಮುಖ್ಯೇನವರ್ ಇದ್ದು ಶಂಕರ ಸೊನ್ನದ ಕಾರ್ಯಕ್ರಮ ನಿರೂಪಿಸಿದರು.