ಕಾಂಗ್ರೆಸ್ ಪಕ್ಷದ್ದು ಹುಳುಕು ಮನಸ್ಸು: ಆರ್ ಅಶೋಕ
ಬೆಂಗಳೂರು, ಸೆ. 23 ನಾಳೆ ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿರುವ ಲೋಕಸಭಾ ಸ್ಪೀಕರ್ ಯಾವ ಪಕ್ಷಕ್ಕೂ ಒಳಪಟ್ಟಿಲ್ಲ. ಅವರಿಗೆ ಗೌರವ ನೀಡಬೇಕಾದ್ದು ಕರ್ತವ್ಯ. ಹುಳುಕು ಮನಸ್ಸಿರುವ ಕಾರಣ ಕಾಂಗ್ರೆಸ್, ಈ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ಸವಿರೋಧ ವ್ಯಕ್ತಪಡಿಸಿವೆ ಎಂದು ಸಚಿವ ಆರ್ ಅಶೋಕ ಆಕ್ಷೇಪಿಸಿದ್ದಾರೆ.
ಬಿಜೆಪಿ ಸರ್ಕಾರ ಹೊಸ ಸಂಪ್ರದಾಯ ಆರಂಭಿಸುತ್ತಿದ್ದು, ವಿಧಾನಸಭೆಯಲ್ಲಿ ಜಂಟಿ ಅಧಿವೇಶನದಲ್ಲಿ ಓಂ ಬಿರ್ಲಾ ಮಾಡುವ ಭಾಷಣದಲ್ಲಿ ಭಾಗವಹಿಸುವುದಿಲ್ಲ. ಒಂದು ವೇಳೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಭಾಗವಹಿಸುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ, “ಈ ವಿಚಾರದಲ್ಲಿ ರಾಜಕೀಯ ಬೇಡ, ನಮ್ಮ ಸ್ಪೀಕರ್ ಗೆ ಹೇಗೆ ಗೌರವ ನೀಡುತ್ತಾರೆಯೋ ಹಾಗೆಯೇ ಲೋಕಸಭಾ ಸ್ಪೀಕರ್ ಇಲ್ಲಿಗೆ ಬಂದಾಗ ಅವರನ್ನೂ ಆದರಿಸಬೇಕು” ಎಂದರು.
ಲೋಕಸಭೆಯಲ್ಲಿ ನಿಲುವಳಿ ಸೂಚನೆ, ಮಸೂದೆ ಮಂಡನೆ ಮತ್ತಿತರ ಕಾರ್ಯಕಲಾಪಗಳು ಹೇಗಾಗುತ್ತವೆ ಎಂಬುದನ್ನು ಓಂ ಬಿರ್ಲಾ ಹಂಚಿಕೊಳ್ಳಲಿದ್ದಾರೆ. ಇದನ್ನು ಕೇಳುವ ಅವಕಾಶವನ್ನು ಸ್ಪೀಕರ್ ಕಲ್ಪಿಸಿದ್ದಾರೆ. ಆದರೆ ರಾಷ್ಟ್ರಮಟ್ಟದ ಕಾಂಗ್ರೆಸ್ ಮುಖಂಡರ ಸಲಹೆ ಮೇರೆ ಪ್ರತಿಪಕ್ಷ ನಾಯಕರು ಜಂಟಿ ಅಧಿವೇಶನದಲ್ಲಿ ಭಾಗವಹಿಸದಿರಲು ಮುಂದಾಗಿದ್ದಾರೆ . ಇದನ್ನು ಖಂಡಿಸುತ್ತೇವೆ ಎಂದರು.