ಟೆಸ್ಟ್: ಇಂಗ್ಲೆಂಡ್ ಸವಾಲು ಎದುರಿಸಲಿದೆ ಭಾರತ

ಟೆಸ್ಟ್: ಇಂಗ್ಲೆಂಡ್ ಸವಾಲು ಎದುರಿಸಲಿದೆ ಭಾರತ

 
ನಾಟಿಂಗ್ ಹ್ಯಾಮ್, ಆ.3 - ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಿದ ಬಳಿಕ ಇಂಗ್ಲೆಂಡ್ ನಲ್ಲಿ ಇರುವ ಟೀಮ್ ಇಂಡಿಯಾ ಬುಧವಾರದಿಂದ ಆರಂಭವಾಗುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡದ ಸವಾಲು ಎದುರಿಸಲಿದೆ.
 
ನಾಟಿಂಗ್ ಹ್ಯಾಮ್ ನ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಪಂದ್ಯ ಗೆಲ್ಲುವ ಪ್ಲಾನ್ ಹಾಕಿಕೊಂಡಿವೆ. ಟಾಸ್ ಈ ಪಂದ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದು, ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ತಂತ್ರ ಉಭಯ ತಂಡಗಳದ್ದಾಗಿದೆ.
 
ಆರಂಭಿಕ ಮಾಯಾಂಕ್ ಅಗರ್ ವಾಲ್ ಅವರಿಗೆ ಗಾಯವಾಗಿದ್ದರಿಂದ, ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಕನ್ನಡಿಗ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಬಹುದು. ಈ ಇಬ್ಬರು ಆಟಗಾರರು ಸಮಯೋಚಿತ ಆಟದ ಪ್ರದರ್ಶನ ನೀಡಬೇಕಿದೆ. ಅಲ್ಲದೆ ತಂಡಕ್ಕೆ ದೊಡ್ಡ ಜೊತೆಯಾಟದ ಕಾಣಿಕೆ ನೀಡಬೇಕಿದೆ.
 
ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರ ರನ್ ಕಲೆ ಹಾಕ ಬೇಕಿದೆ. ಈ ಮೂಲಕ ಅವರ ಮೇಲೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಇನ್ನು ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರೆ, ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ತಮ್ಮ ನೈಜ ಆಟವನ್ನು ಆಡಬೇಕಿದೆ.
 
ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಮ್ಮ ಅನುಭವ ಧಾರೆ ಎರೆದು ಆಡಬೇಕಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ಆತಿಥೇಯರನ್ನು ಕಾಡಬೇಕಿದೆ.
 
ಇಂಗ್ಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು, ತಂಡಕ್ಕೆ ನೆರವಾಗಬಲ್ಲರು. ರೋರಿ ಬರ್ನ್ಸ್, ಡೋಮಿನಿಕ್ ಸಿಬ್ಲೆ, ಜಾನಿ ಬೇರ್ ಸ್ಟೋ, ಜೋ ರೂಟ್, ಜೋಸ್ ಬಟ್ಲರ್ ದೊಡ್ಡ ಇನ್ನಿಂಗ್ಸ್ ಕಟ್ಟುವ ಕನಸು ಹೊಂದಿದ್ದಾರೆ. ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್ ಶಿಸ್ತು ಬದ್ಧ ದಾಳಿ ನಡೆಸಬೇಕಿದೆ.

ಸುದ್ದಿ ಓದಿ