ಕಾಗವಾಡ

ಐನಾಪುರದಲ್ಲಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ

ಐನಾಪುರದಲ್ಲಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ

ಲೋಕದರ್ಶನ ವರದಿ 

  

  

  

ಐನಾಪುರದಲ್ಲಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ  

ಕಾಗವಾಡ 12: ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಕಲಿಸಬೇಕು. ಮಕ್ಕಳು ಮೊಬೈಲ್ ಗೀಳಿನಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಖ್ಯಾತ ನ್ಯಾಯವಾದಿ ಎ.ಎಂ. ಖೋಬ್ರಿ ಹೇಳಿದರು.  

ಐನಾಪುರ ಪಟ್ಟಣದ ಕೆಆರ್‌ಇ ಶಿಕ್ಷಣ ಸಂಸ್ಥೆ ಹಾಗೂ ಕಮಲಾ ವಾಸುದೇವ ಫೌಂಡೇಶನ್ನ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ, ದಿವಂಗತ ಜಿ.ಎಂ. ದೇಶಪಾಂಡೆ ಅವರ 132ನೇ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಬೆಳೆಯುವ ಬೀಜಗಳು ಹಾಗೂ ಹಣ್ಣುಗಳು ತಾವು ಬೆಳೆದು ಇತರರಿಗೆ ಉಪಯೋಗವಾಗುತ್ತವೆ. ಬೆಳಕು ನೀಡುವ ಸೂರ್ಯ-ಚಂದ್ರರು ತಮ್ಮ ಕಾರ್ಯವನ್ನು ಎಂದಿಗೂ ಹೊಗಳಿಕೊಳ್ಳುವುದಿಲ್ಲ. ಅದೇ ರೀತಿ ಕಮಲಾ ವಾಸುದೇವ ಫೌಂಡೇಶನ್ ಕೂಡ ಎಲೆಮರೆಯ ಕಾಯಿಯಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಂಸ್ಥಾಪಕ ಮಧುಸೂದನ ಮಹಾಳಿ ಅವರು ತಾವು ಕಲಿತ ಶಾಲೆಗಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.  

ಮಧುಸೂದನ ಮಹಾಳಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಐನಾಪುರ ಸುಶಿಕ್ಷಿತರ ಪಟ್ಟಣವಾಗಿ ಗುರುತಿಸಿಕೊಳ್ಳಲು ಕೆಆರ್‌ಇ ಶಿಕ್ಷಣ ಸಂಸ್ಥೆ ಹಾಗೂ ಇಲ್ಲಿನ ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ. ಬೇರೆಡೆ ಹೋದಾಗ ‘ನಾವು ಐನಾಪುರದವರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ ಎಂದರು.  

ಕಾರ್ಯಕ್ರಮವನ್ನು ಗಣ್ಯರು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.  

ನಿವೃತ್ತ ಶಿಕ್ಷಕರಾದ ಪುಷ್ಪಾ ದೇಶಪಾಂಡೆ, ಸಿ.ಎಂ. ಯಾದವಾಡ ಹಾಗೂ ಕೆಆರ್‌ಇ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪೋತದಾರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಉಪಾಧ್ಯಕ್ಷ ಸಂಜಯ ಬಿರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಪ್ರವೀಣ ಕುಲಕರ್ಣಿ, ತಮ್ಮಣ್ಣ ಪಾರಶೆಟ್ಟಿ, ಸುರೇಶ ಗಾಣಿಗೇರ, ಉದಯ ನಿಡಗುಂದಿ, ಸಂತೋಷ ಪಾಟೀಲ, ಚಂದ್ರಕಾಂತ ಬಜಾಜವಾಡ, ಅನೀಲ ಕಮತಗಿ, ಮೋರೆಶ್ವರ ಪಟವರ್ಧನ, ಗೋಪಾಲರಾವ ಕಟ್ಟಿ, ನಾರಾಯಣ ಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಉಪಪ್ರಾಚಾರ್ಯ ಎ.ಎಂ. ಹುಲ್ಲೇನ್ನವರ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಎ.ಎಸ್‌. ನಾಯಕ ನಿರೂಪಿಸಿದರು. ಪ್ರಾಚಾರ್ಯ ಬಿ. ಪ್ರೇಮಾನಂದ ವಂದಿಸಿದರು. 


ಸುದ್ದಿ ಓದಿ