ಟಿ-20: ವೆಸ್ಟ್ ಇಂಡೀಸ್‌ಗೆ ರೋಚಕ ಜಯ

ಟಿ-20: ವೆಸ್ಟ್ ಇಂಡೀಸ್‌ಗೆ ರೋಚಕ ಜಯ

ಸೇಂಟ್ ಲೂಸಿಯಾ, ಜು.17 (ಯುಎನ್ಐ)- ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಡೆರನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆತೀಥೆಯ ವೆಸ್ಟ್ ಇಂಡೀಸ್ ತಂಡ ಹದಿನಾರು ರನ್ ಗಳ ರೋಚಕ ಜಯ ದಾಖಲಿಸಿದೆ. 

ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಐದು ಪಂದ್ಯಗಳ ಟಿ-20 ಸರಣಿಯನ್ನು 4-1 ರಿಂದ ತನ್ನ ಮಡಿಲಿಗೆ ಹಾಕಿಕೊಂಡಿತು. ಮೊದಲ ಮೂರು ಟಿ-20 ಪಂದ್ಯಗಳನ್ನು ವೆಸ್ಟ್ ಇಂಡೀಸ್ ಗೆಲುವು ದಾಖಲಿಸಿ ಆಗಲೇ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಪಡೆದಿತ್ತು. 

ಜಯ ಸಾಧಿಸಲು ನಿಗದಿತ 20 ಓವರ್‌ಗಳಲ್ಲಿ 200 ರನ್ ಸೇರಿಸುವ ಗುರಿ ಪಡೆದ ಆಸ್ಟ್ರೇಲಿಯಾ, ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್ ಮಾತ್ರ ಸೇರಿಸಿ ಸೋಲು ಅನುಭವಿಸಿತು. 

ಆಸ್ಟ್ರೇಲಿಯಾ ಪರ ನಾಯಕ ಆರೋನ್ ಫಿಂಚ್ 34, ಮಿಚೆಲ್ ಮಾರ್ಷ 30, ಮ್ಯಾಥ್ಯೂ ವೇಡ್ 26 ಹಾಗೂ ಮೊಸೆಸ್ ಹೆನ್ರಿಕ್ಸ್ 21 ರನ್ ಮಾಡಿದರೂ ತಂಡವನ್ನು ಜಯದ ಗುರಿ ಮುಟ್ಟಿಸುವಲ್ಲಿ ವಿಫಲರಾದರು. 

ವೆಸ್ಟ್ ಇಂಡೀಸ್ ಪರ ಶೆಲ್ಡನ್ ಕಾಟ್ರೆಲ್ 28 ರನ್ ಗೆ ಮೂರು, ಆಂಡ್ರೆ ರೆಸಲ್ 43 ಕ್ಕೆ ಮೂರು ಹಾಗೂ ಹೇಡನ್ ವಾಲ್ಶ್ 43 ಕ್ಕೆ ಒಂದು ವಿಕೆಟ್ ಉರುಳಿಸಿದರು. 

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಏವಾನ್ ಲೂಯಿಸ್ ಸಿಡಿಸಿದ ಮಿಂಚಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಕಲೆ ಹಾಕಿತು.

ಸ್ಕೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಏವಾನ್ ಲೂಯಿಸ್, ಕೇವಲ 34 ಎಸೆತಗಳಲ್ಲಿ ಎದುರಿಸಿ 4 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 79 ರನ್ ಮಾಡಿದರು. ಉಳಿದಂತೆ ನಿಕೋಲಸ್ ಪೂರನ್ 31, ಕ್ರಿಸ್ ಗೇಲ್ 21 ಹಾಗೂ ಲೆಂಡ್ಲೆ ಸಿಮೋನ್ಸ್ 21 ರನ್ ಗಳಿಸಿದರು. 

ಆಸ್ಟ್ರೇಲಿಯಾ ಪರ ಆಂಡ್ರೆ ಟೈ ಮೂರು, ಮಿಚೆಲ್ ಮಾರ್ಷ್, ಆಡಂ ಜಂಪಾ ತಲಾ ಎರಡು ವಿಕೆಟ್ ಪಡೆದರು. 

ಸುದ್ದಿ ಓದಿ