ತಂದೆ ತಾಯಿ ಗುರುವಿನ ಸೇವೆಯಿಂದ ಸಾರ್ಥಕತೆ : ಸಪನಾ ಅನಿಗೋಳ
ಮಹಾಲಿಂಗಪುರ 26: ತಂದೆ, ತಾಯಿ, ಗುರುವಿನ ಸೇವೆಯಿಂದ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಹೇಳಿದರು.
ಸ್ಥಳೀಯ ಜೆಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟುವುದೇ ಮಹಾಭಾಗ್ಯ, ಪ್ರಾರ್ಥನೆಯಿಂದ ದೀರ್ಘಾಯುಷ್ಯ ಸಾಧ್ಯ ಹಾಗಾಗಿ ಪ್ರತಿಯೊಬ್ಬರೂ ನಿತ್ಯ ಪ್ರಾರ್ಥನೆ ಯೋಗಗಳಲ್ಲಿ ತೊಡಗಿ ಸಾಧಕರಾಗಿ, ನಿಮ್ಮ ಹೆಸರನ್ನು ಜಗತ್ತು ಗೂಗಲ್ನಲ್ಲಿ ಹುಡುಕುವಂತಾಗಲಿ ಎಂದರು.
ರಾಷ್ಟ್ರ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪ್ನಾ ಅನಿಗೋಳ ಅವರನ್ನು ಪುಷ್ಪವೃಷ್ಠಿ ಮತ್ತು ಪಥ ಸಂಚಲನದ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ವಿಶೇಷ ಕ್ರಿಯಾಶೀಲ ಬೋಧನೆಯಿಂದ ರಾಷ್ಟ್ರ್ರಶಸ್ತಿ ಪಡೆದ ಮಾತೃಹೃದಯಿ ಸಪನಾ ಅನಿಗೋಳ ಆಧುನಿಕ ಸಾವಿತ್ರಿಬಾಯಿ ಫುಲೆ, ಅಕ್ಷರದವ್ವ. ಅವರ ಬದ್ಧತೆ ಮತ್ತು ಸರಳತೆ ಸರ್ವರಿಗೂ ಆದರ್ಶಪ್ರಾಯ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮಹೇಶ ಮಣ್ಣಯ್ಯನವರಮಠ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ಇದ್ದರು. ಶಿಕ್ಷಕಿ ರೂಪಾ ಜಾಡಗೌಡರ ನಿರೂಪಿಸಿ, ಶಿಕ್ಷಕ ಎಂ.ಎಸ್.ಕೊಪ್ಪ ವಂದಿಸಿದರು.