ಮುಂದಗೋಡ

ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಲೋಕದರ್ಶನ ವರದಿ 

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಹೆಚ್ಚುವರಿ ಬಸ್ ಬಿಡುವಂತೆ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಗೆ ಹೋಗಲು ಬಿಡದೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.         

ನಂದಿಕಟ್ಟಾ, ಹುಲಿಹೊಂಡ ಮತ್ತು ರಾಮಪುರ ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂದೂರ ಪ್ರೌಢಶಾಲೆ ಮತ್ತು ಪಟ್ಟಣದ ಶಾಲೆಗಳಿಗೆ ಬರುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಒಂದೇ ಬಸ್ ಆಗಿರುವುದರಿಂದ ಬಸ್ ಭರ್ತಿಯಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲಾ-ಕಾಲೇಜ್ ವೇಳೆಗೆ ಹೆಚ್ಚುವರಿ ಬಸ್ ಬಿಡುವಂತೆ ಜು.27ರಂದು ನಂದಿಕಟ್ಟಾ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಿ ಬಸ್ ಬಿಡದಿದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಗುರುವಾರ ಇಂದೂರಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಬಸ್‌ಗಾಗಿ ರಾತ್ರಿವರೆಗೂ ಪ್ರತಿಭಟನೆ ಮಾಡಿದರೂ ಸ್ಥಳಕ್ಕೆ ಯಾವ ಅಧಿಕಾರಿಯೂ ಭೇಟಿ ನೀಡಿರಲಿಲ್ಲ.  

ಇದರಿಂದ ಆಕ್ರೋಶಗೊಂಡ ನಂದಿಕಟ್ಟಾ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮೊದಲಿಗೆ ಪಟ್ಟಣದ ಶಿವಾಜಿ ಸರ್ಕಲ್ ಹತ್ತಿರ ವಾಹನ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಅಡೆ-ತಡೆ ಉಂಟಾಯಿತು. ಪಿಎಸ್‌ಐ ಬಸವರಾಜ ಮಬನೂರ ಮತ್ತು ಪೊಲೀಸರು ಪ್ರತಿಭಟನೆ ಮಾಡದಂತೆ ಮನವೊಲಿಸಿದರು. ನಂತರ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನಾಕರರು ತೆರಳಿ ಕೆಲ ಹೊತ್ತು ಬಸ್ ನಿಲ್ದಾಣದಿಂದ ಬಸ್‌ಗಳನ್ನು ಹೊರಗಡೆ ಹೋಗದಂತೆ ಪ್ರತಿಭಟಿಸಿ ನಿಗಮದ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿ ಡಿಪೋ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ನಿಗಮದ ಅಧ್ಯಕ್ಷ  ವಿ.ಎಸ್‌.ಪಾಟೀಲ ಅವರು ಬರುವಂತೆ ಪಟ್ಟು ಹಿಡಿದರು. ಬಸ್ ಸಮಸ್ಯೆ ಹೇಳಿದರೆ ವಾಕರಸಾ ಸಂಸ್ಥೆ ಅಧ್ಯಕ್ಷರು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. 

ನಿಲ್ದಾಣದ ನಿಯಂತ್ರಣಾ ಕೊಠಡಿಗೆ ತೆರಳಿ ವಾಗ್ವಾದಕ್ಕೆ ಇಳಿದರು. ನಿಗಮದ ಅಧ್ಯಕ್ಷರು ನಮ್ಮ ಕ್ಷೇತ್ರದವರು ಹೆಚ್ಚುವರಿ ಬಸ್ ಬಿಡುವುದಿಲ್ಲ ಎಂದರೆ ಹೇಗೆ? ಪ್ರತಿನಿತ್ಯ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಮ್ಮ ಅಕ್ಕ-ಪಕ್ಕದ ಗ್ರಾಮಗಳಿಂದ ಶಾಲೆಗೆ ಓಡಾಡುತ್ತಾರೆ. ಒಂದೇ ಬಸ್‌ನಲ್ಲಿ ಇಷ್ಟೊಂದು ವಿಧ್ಯಾರ್ಥಿಗಳು ಪ್ರಯಾಣಿಸುತ್ತಾರೆ. ನಿನ್ನೆ ನಂದಿಕಟ್ಟಾ ಗ್ರಾಮದ ವಿದ್ಯಾರ್ಥಿನಿ ಬಸ್‌ನಿಂದ ಬಿದ್ದು ತಲೆಗೆ ಗಾಯ ಪಡಿಸಿಕೊಂಡಿದ್ದಾಳೆ. ಈ ವಿಷಯವನ್ನು ನಿಗಮದ ಅಧ್ಯಕ್ಷರಿಗೆ ಹೇಳಿದರೆ ಉಡಾಫೆಯಾಗಿ ಉತ್ತರಿಸುತ್ತಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಯಲ್ಲಾಪುರ ಡಿಪೋ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಅವರ ಮುಂದೆ ತಮ್ಮ ಆಕ್ರೋಶ ಹೊರಹಾಕಿದರು. ನೀವೇ ಪೋನ್ ಕರೆ ಮಾಡಿ ತಕ್ಷಣವೇ ಇಲ್ಲಿಗೆ ಬರುವಂತೆ ಹೇಳಿ ಎಂದು ಪಟ್ಟು ಹಿಡಿದರು. ವ್ಯವಸ್ಥಾಪಕರು ಪ್ರತಿಭಟನಾಕರನ್ನು ಸಮಾಧಾನ ಪಡಿಸಲು ಮುಂದಾದಾಗ ಅವರಿಗೆ ಲಿಖಿತವಾಗಿ ಭರವಸೆ ನೀಡಿ ಎಂದು ಹೇಳಿ ಡಿಪೋ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಲಿಖಿತವಾಗಿ ಬರೆದುಕೊಟ್ಟ ನಂತರವೇ ಪ್ರತಿಭಟನೆ ಹಿಂಪಡೆದರು. 


ಸುದ್ದಿ ಓದಿ