ಧಾರವಾಡ - ಹುಬ್ಬಳ್ಳಿ

ಮಾದಕ ವಸ್ತು ಸೇವನೆ ತಡೆಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯ

ಮಾದಕ ವಸ್ತು ಸೇವನೆ ತಡೆಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯ

ಲೋಕದರ್ಶನ ವರದಿ 

ಧಾರವಾಡ 22: ಮಾದಕ ವಸ್ತು ಸೇವನೆ ನಮ್ಮ ನಾಗರಿಕ ಸಮಾಜಕ್ಕೆ ದುರಂತವಾಗಿದ್ದು, ನಾಡಿನ ಆಸ್ತಿಯಾಗಬೇಕಾದ ಯುವಕರೇ ಈ ಕರಾಳ ಛಾಯೆಯಲ್ಲಿ ಹೆಚ್ಚು ಸಿಲುಕುತ್ತಿದ್ದಾರೆ. ಮಾದಕ ವಸ್ತು ಸೇವನೆ ಒಂದು ರೀತಿಯ ಮಾನಸಿಕ ದಾಸ್ಯವಾಗಿದೆ ಎಂದು ಧಾರವಾಡದ ಸೋನಿಯಾ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಎಚ್‌.ವಿ. ಡಂಬಳ ಹೇಳಿದರು.  

ಸಂಗೊಳ್ಳಿ ರಾಯಣ್ಣ ನಗರದ ಸೋನಿಯಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಡಳಿಯ ವತಿಯಿಂದ ಆಯೋಜಿಸಿದ್ದ ‘ಮಾದಕ ವಸ್ತು ದುರ್ಬಳಕೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿ ಇದ್ದು, ದೇಶದ ಸಮಗ್ರ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಅವರಲ್ಲಿದೆ. ಆದರೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಜವಾಬ್ದಾರಿಯಿಂದ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ನೆರೆಹೊರೆಯವರಿಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.  

ಧಾರವಾಡದ ಡಿಮ್ಯಾನ್ಸ್‌ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಮಾದಕ ವಸ್ತುಗಳ ದುರ್ಬಳಕೆ ದಾರಿತಪ್ಪಿದ ವರ್ತನೆಯಾಗಿದೆ. ವಿದ್ಯಾರ್ಥಿಗಳು ಕೆಟ್ಟ ಸ್ನೇಹ ಹಾಗೂ ಸಹವಾಸದ ಪರಿಣಾಮ ಮಾದಕ ವಸ್ತು ಸೇವನೆಗೆ ಬಲಿಯಾಗುವ ಸಾಧ್ಯತೆ ಇದೆ. ಇದರಿಂದ ಹಲವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಆರೋಗ್ಯಕರ ಜೀವನ ನಡೆಸಬೇಕು ಎಂದು ಹೇಳಿದರು.  

ಪ್ರಾಚಾರ್ಯ ಡಾ. ಪ್ರಕಾಶ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳಿಗೆ ಬಲಿಯಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.  

ಪ್ರೊ. ಶಾಂಭವಿ ನರಗುಂದ ಪ್ರಾರ್ಥಿಸಿದರು. ಪ್ರೊ. ಮಲ್ಲಪ್ಪ ಭೈರ​‍್ಪ ಸ್ವಾಗತಿಸಿದರು. ಕವಿವ ಸಂಘದ ಶಿಕ್ಷಣ ಮಂಡಳಿಯ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಂಗಾಧರ ಮರಳಿಹಳ್ಳಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಯಾಸ್ಮಿನ್ ಬೀಳಗಿ ವಂದಿಸಿದರು. ಪ್ರೊ. ಲಕ್ಷ್ಮೀಕುಮಾರಿ ನಿರೂಪಿಸಿದರು. ಎಸ್‌.ವಿ. ಡಂಬಳ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ