ಮಹಲಿಂಗಪುರ

ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ; ಬಸ್‌ಗಾಗಿ ನಿತ್ಯ ಪರದಾಟ

ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ; ಬಸ್‌ಗಾಗಿ ನಿತ್ಯ ಪರದಾಟ

ಲೋಕದರ್ಶನ ವರದಿ 

ಮೆಟ್ಟಿಲು, ಕಂಬ ಹಿಡಿದು ಅಪಾಯಕಾರಿ ಪಯಣ* ಮಹಾಲಿಂಗಪುರಹಿಗೋಕಾಕ, ಚಿಕ್ಕೋಡಿ ಮಾರ್ಗಕ್ಕೆ ಹೆಚ್ಚುವರಿ ಬಸ್‌ಗಳೇ ಇಲ್ಲ 

ಮಹಾಲಿಂಗಪುರ: ಓದಬೇಕು, ಮುಂದೆ ಬರಬೇಕು ಅನ್ನೋ ಕನಸು ಹೊತ್ತು ಮಹಾಲಿಂಗಪುರಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ದಿನವೂ ಸಾವಿರಾರು ವಿದ್ಯಾರ್ಥಿಗಳು ಬರ್ತಾರೆ. ಬೆಳಿಗ್ಗೆ ಹೇಗೋ ಶಾಲಾ-ಕಾಲೇಜು ಸೇರಿಕೊಳ್ಳೋ ಮಕ್ಕಳು, ಸಂಜೆ ಕ್ಲಾಸ್ ಮುಗಿಸಿಕೊಂಡು ಮನೆಗೆ ವಾಪಸ್ ಹೋಗೋ ಹೊತ್ತಿಗೆ ಮಾತ್ರ ಬಸ್‌ಗಾಗಿ ಪಡಬಾರದ ಪಾಡು ಪಡಬೇಕಾದ ಸ್ಥಿತಿ! 

ಮಹಾಲಿಂಗಪುರದಿಂದ ಗೋಕಾಕ, ಚಿಕ್ಕೋಡಿ ಸೇರಿದಂತೆ ವಿವಿಧ ಮಾರ್ಗಗಳಿಗೆ ಸಂಜೆ ವೇಳೆ ತೆರಳುವ ಬಸ್‌ಗಳು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಇಲ್ಲದ ಕಾರಣ, ಬಸ್ ಒಳಗೆ ಕಾಲಿಡಲೂ ಜಾಗ ಸಿಗದಂತಾಗಿದೆ.

ಹೀಗಾಗಿ ಕೆಲ ವಿದ್ಯಾರ್ಥಿಗಳು ಬಸ್‌ನ ಬಾಗಿಲ ಮೆಟ್ಟಿಲಿನ ಮೇಲೆ ನಿಂತು, ಕಂಬ ಹಿಡಿದು ನೇತಾಡಿಕೊಂಡೇ ಜೀವ ಕೈಯಲ್ಲಿ ಇಟ್ಟುಕೊಂಡು ಪಯಣ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. 

ಇದು ಇಂದಿನ ಸಮಸ್ಯೆಯಲ್ಲ. ದಿನವೂ ಕಣ್ಣಿಗೆ ಕಾಣುವ ದೃಶ್ಯ. ಬಸ್ ಬಂದ ತಕ್ಷಣ ಹತ್ತೋಕೆ ವಿದ್ಯಾರ್ಥಿಗಳ ದೌಡು, ಒಳಗೆ ಜಾಗ ಇಲ್ಲದಿದ್ದರೂ ಹೇಗಾದರೂ ಊರು ಸೇರಬೇಕು ಅನ್ನೋ ಅನಿವಾರ್ಯತೆ. ಒಂದೆಡೆ ಮಕ್ಕಳ ಭವಿಷ್ಯದ ಕನಸು; ಇನ್ನೊಂದೆಡೆ ಅದೇ ಮಕ್ಕಳ ಜೀವಕ್ಕೆ ಕುತ್ತು ತರುವ ಪ್ರಯಾಣ! 

ಒಂದು ಎಡವಟ್ಟು ಸಾಕು...! 

ಬಸ್‌ನ ಮೆಟ್ಟಿಲ ಮೇಲೆ ನಿಂತಿರುವ ವಿದ್ಯಾರ್ಥಿ ಸ್ವಲ್ಪ ಆಯತಪ್ಪಿದರೂ ಸಾಕು. ಚಲಿಸುತ್ತಿರುವ ಬಸ್‌ನಿಂದ ಕೆಳಗೆ ಬಿದ್ದರೆ ಏನಾಗಬಹುದು ಎಂಬುದನ್ನ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಪಘಾತ ಸಂಭವಿಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಕ್ಕಿಂತ ಅನಾಹುತ ಸಂಭವಿಸುವ ಮುನ್ನವೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ಪಾಲಕರು ಹಾಗೂ ಸಾರ್ವಜನಿಕರ ಆಗ್ರಹ. 

ಕುಟುಂಬದ ಕಷ್ಟ-ಕಾರ​‍್ಪಣಯಗಳ ನಡುವೆಯೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಾಲಕರು ದುಡಿಯುತ್ತಿದ್ದಾರೆ. ನಮ್ಮ ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಬದುಕು ಕಟ್ಟಿಕೊಳ್ಳಲಿ ಅನ್ನೋ ಆಸೆಯಿಂದ ಶಾಲಾ-ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಆದರೆ ವಿದ್ಯಾಭ್ಯಾಸ ಮುಗಿಸಿಕೊಂಡು ಮನೆಗೆ ವಾಪಸ್ ಬರೋ ಹೊತ್ತಿಗೆ ಮಕ್ಕಳ ಜೀವವನ್ನೇ ಪಣಕ್ಕಿಟ್ಟು ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿರುವುದು ದುರಂತದ ಸಂಗತಿ. 

ಅನಾಹುತ ಆದ್ಮೇಲೆ ಓಡಾಡೋದು ಯಾಕ್ರಿ? 

ಚೆನ್ನಮ್ಮ ವೃತ್ತದ ಸ್ಥಳೀಯರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾಲಿಂಗಪುರಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಮಕ್ಕಳು ಓದೋಕೆ ಬರ್ತಾರೆ. ಗೋಕಾಕ, ಚಿಕ್ಕೋಡಿ ಕಡೆಗೆ ಹೋಗೋ ಸಮಯದಲ್ಲಿ ಬಸ್‌ಗಳ ಸಂಖ್ಯೆ ಸಾಲೋದಿಲ್ಲ. ಬಸ್ ಬಂದ ತಕ್ಷಣ ಮಕ್ಕಳು ತುಂಬಿಕೊಳ್ಳುತ್ತಾರೆ. ಒಳಗಡೆ ಜಾಗ ಸಿಗದವರು ಬಾಗಿಲಿನಾಗ ನಿಂತುಕೊಂಡು, ಕಂಬ ಹಿಡಕೊಂಡು ಹೋಗ್ತಾರೆ. ಇದು ನೋಡೋಕೆನೇ ಭಯ ಆಗ್ತೈತಿ. ನಾಳೆ ಏನಾದ್ರೂ ಅನಾಹುತ ಆದ್ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳೋದು ಬೇಡ; ಇವತ್ತೇ ಬಸ್ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಸಮಸ್ಯೆ ಗೊತ್ತಿದ್ರೂ ಪರಿಹಾರ ಯಾಕಿಲ್ಲ? 

ವಿದ್ಯಾರ್ಥಿಗಳ ಸಂಚಾರದ ಪ್ರಮಾಣ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಗೊತ್ತಿರುವ ವಿಚಾರವೇ. ಆದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಸಮಯದಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಮಹಾಲಿಂಗಪುರಹಿಗೋಕಾಕ ಹಾಗೂ ಮಹಾಲಿಂಗಪುರಹಿಚಿಕ್ಕೋಡಿ ಮಾರ್ಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಸಂಚಾರದ ಸಮಯಕ್ಕೆ ಹೆಚ್ಚುವರಿ ಟ್ರಿಪ್‌ಗಳನ್ನು ಆರಂಭಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಗ್ರಾಮಗಳಿಗೆ ಅನುಗುಣವಾಗಿ ಶಾಶ್ವತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದರೆ ವಿದ್ಯಾರ್ಥಿಗಳ ಸಂಚಾರದ ಕುರಿತು ಸಮೀಕ್ಷೆ ನಡೆಸಿ, ಅದರ ಆಧಾರದ ಮೇಲೆ ಹೊಸ ಬಸ್‌ಗಳನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಪುಸ್ತಕ ಇರಬೇಕಾದ ಕೈಯಲ್ಲಿ ಬಸ್ ಕಂಬ! 

ಮಕ್ಕಳು ಶಾಲೆಗೆ ಹೋಗುವಾಗ ಅವರ ಕೈಯಲ್ಲಿ ಪುಸ್ತಕ, ನೋಟ್‌ಬುಕ್ ಇರಬೇಕು. ಭವಿಷ್ಯದ ಕನಸು ಇರಬೇಕು. ಆದರೆ ಸಂಜೆ ಮನೆಗೆ ವಾಪಸ್ ಹೋಗುವಾಗ ಅದೇ ಕೈಯಲ್ಲಿ ಬಸ್‌ನ ಕಂಬ ಹಿಡಿದು ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ಬರಬಾರದು. 

ವಿದ್ಯಾರ್ಥಿಗಳ ಸುರಕ್ಷತೆ ವಿಚಾರದಲ್ಲಿ ಅಧಿಕಾರಿಗಳು ನಾಳೆ ನೋಡೋಣ ಎಂಬ ಧೋರಣೆ ಬಿಟ್ಟು ತಕ್ಷಣ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು. ಒಂದು ಜೀವಕ್ಕೆ ಬೆಲೆ ಕಟ್ಟಲಾಗದು. ಅನಾಹುತ ಸಂಭವಿಸಿದ ಮೇಲೆ ಪರಿಹಾರ, ತನಿಖೆ, ಹೇಳಿಕೆ ನೀಡುವುದಕ್ಕಿಂತ ಮುಂಚೆಯೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಒಕ್ಕೊರಲಿನ ಒತ್ತಾಯ. 

ಮಕ್ಕಳ ಕೈಯಾಗ ಪುಸ್ತಕ ಇರಬೇಕ್ರಿ... ಬಸ್‌ನ ಬಾಗಿಲಿನ ಕಂಬ ಅಲ್ಲ! 


ಸುದ್ದಿ ಓದಿ