ಮುಂಡಗೋಡದಲ್ಲಿ ಬೀದಿನಾಯಿಗಳ ಹಾವಳಿ: ಜನರಲ್ಲಿ ಆತಂಕ
ಮುಂಡಗೋಡ 03: ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಬೀದಿನಾಯಿಗಳ ಹಾವಳಿ ತೀವ್ರಗೊಂಡಿದ್ದು, ಸಾರ್ವಜನಿಕರು ಆತಂಕದಿಂದ ಸಂಚರಿಸುವಂತಾಗಿದೆ. ಪಟ್ಟಣದ ಹಲವು ವಾರ್ಡ್ಗಳಲ್ಲಿ ಗುಂಪು ಗುಂಪಾಗಿ ನಾಯಿಗಳು ಓಡಾಡುತ್ತಿದ್ದು, ಗಾಂಧಿನಗರ, ನೆಹರುನಗರ, ಅಯ್ಯಪ್ಪಸ್ವಾಮಿ ಗುಡಿ ರಸ್ತೆ, ಬಂಕಾಪುರ ರಸ್ತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಬೆಳಗಿನ ವಾಕಿಂಗ್ಗೆ ತೆರಳುವ ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರಾತ್ರಿ ವೇಳೆ ಸಂಚರಿಸುವ ಬೈಕ್ ಸವಾರರನ್ನು ನಾಯಿಗಳು ಅಟ್ಟಾಡಿಸುತ್ತಿವೆ. ಇದರಿಂದ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಗಳ ಮುಂದೆ ಆಟವಾಡುವ ಮಕ್ಕಳ ಮೇಲೂ ನಾಯಿಗಳು ದಾಳಿ ಮಾಡಲು ಯತ್ನಿಸುತ್ತಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ. ದೇಶಪಾಂಡೆ ನಗರದಲ್ಲಿ ಕಳೆದ ಒಂದು ವಾರದಿಂದ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಂಕಿತ ಹುಚ್ಚುನಾಯಿಯೊಂದು ಇಬ್ಬರು-ಮೂರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಕುರಿತು ತಕ್ಷಣ ಗಮನಹರಿಸಿ, ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶಂಕಿತ ಹುಚ್ಚುನಾಯಿಗಳನ್ನು ಸುರಕ್ಷಿತವಾಗಿ ಹಿಡಿದು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.