ಧಾರವಾಡ - ಹುಬ್ಬಳ್ಳಿ

ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಕುಮಾರ ಕೆ.ಎಫ್‌. ಕರೆ

ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಕುಮಾರ ಕೆ.ಎಫ್‌. ಕರೆ

ಧಾರವಾಡ 31: ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದ್ದು, ಶಿಸ್ತು, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್‌. ಕರೆ ಹೇಳಿದರು.  

ಜಿಲ್ಲಾ ಪಂಚಾಯತ್ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಧಾರವಾಡ ಗ್ರಾಮೀಣ ವ್ಯಾಪ್ತಿಯ ಕ್ಯಾರಕೊಪ್ಪ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಮುಮ್ಮಿಗಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಧಾರವಾಡದ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.  

ಆರೋಗ್ಯಯುತ ಜೀವನಕ್ಕೆ ದೈಹಿಕ ಚಟುವಟಿಕೆ ಮತ್ತು ಮಾನಸಿಕ ಸದೃಢತೆ ಎರಡೂ ಅಗತ್ಯ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಜೀವನ ಮೌಲ್ಯಗಳು, ಶಿಸ್ತು ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಹುರಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಇಚ್ಛಾಶಕ್ತಿ, ಏಕಾಗ್ರತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ಉನ್ನತ ಮಟ್ಟದ ಸ್ಪರ್ಧೆಗಳಿಗೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.  

ಸಿಆರ​‍್ಿ ಭೀಮಸಿ ಕಪ್ಪಲಗುಂದಿ ಮಾತನಾಡಿ, ಸೋಲು ಯಶಸ್ಸಿನ ಮೆಟ್ಟಿಲಾಗಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಲಾಯಿತು. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ಯಾರಕೊಪ್ಪ ಹಿರಿಯ ಪ್ರಾಥಮಿಕ ಶಾಲೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು.  

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಹುರಳಿ, ಉಪಾಧ್ಯಕ್ಷ ಶಿವಪುತ್ರ​‍್ಪ ಲಕಮಾಪೂರ, ಶಿಕ್ಷಣ ಸಂಯೋಜಕರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು, ತಂಡದ ವ್ಯವಸ್ಥಾಪಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಯುವಕರು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.  ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು. 


ಸುದ್ದಿ ಓದಿ