ತೂಕದ ಯಂತ್ರ ಸ್ಥಾಪನೆಗಾಗಿ ಸ್ಥಳ ಪರೀಶೀಲನೆ
ಕೊಲ್ಹಾರ, 05 : ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕೊಲ್ಹಾರ ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಪ್ರದೇಶದಲ್ಲಿ ತೂಕದ ಯಂತ್ರ ಸ್ಥಾಪಿಸುವ ಕುರಿತು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಸ್ಥಳ ಪರೀಶೀಲನೆ ನಡೆಸಿದರು.
ಸೋಮವಾರ ಕೊಲ್ಹಾರ ಪಟ್ಟಣದಲ್ಲಿ ಉದ್ದೇಶಿತ ತೂಕದ ಯಂತ್ರ ಸ್ಥಾಪನೆಗಾಗಿ ಸ್ಥಳೀಯ ಪುನರ್ವಸತಿ ಕೇಂದ್ರದಲ್ಲಿ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಂಜೂರಾಗಿರುವ 4, ಎಕರೆ ಜಮೀನು ವೀಕ್ಷಿಸಿದರು. ಈ ಕುರಿತು ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಅಲ್ಲಾಭಕ್ಷ ಸೇರಿದಂತೆ ಎಇಇ ಎಲ್.ಬಿ.ಲಮಾಣಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸದರಿ ನಿಗದಿತ ನಿವೇಶನ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಅಧೀನದಲ್ಲಿದ್ದು ಉದ್ದೇಶಿತ ಯೋಜನೆಗೆ ಸ್ಥಳ ಹಸ್ತಾಂತರ ಮಾಡುವಂತೆ ಪತ್ರ ಬರೆಯಲು ಸ್ಥಳೀಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕಬ್ಬು ತೂಕದ ಯಂತ್ರ ಸ್ಥಾಪನೆ ಸ್ಥಳ ರಾಷ್ಟ್ರೀಯ ಹೆದ್ದಾರಿ ಪಕ್ಷದಲ್ಲಿ ಇರುವ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಏಕಮುಖ ಸಂಚಾರ ವ್ಯವಸ್ಥೆ ರೂಪಿಸುವಂತೆ ಸ್ಥಳದಲ್ಲಿದ್ದ ಪಿಎಸ್‌ಐ ಅಶೋಕ ನಾಯಕ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೊಲ್ಹಾರ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ.ಎಸ್.ಗಿಡ್ಡಪ್ಪಗೋಳ, ಸದಸ್ಯರಾದ ವಿಜಯಕುಮಾರ ಗಿಡ್ಡಪ್ಪಗೋಳ, ತೌಸಿಫ್ ಗಿರಗಾಂವಿ, ಶ್ರೀಶೈಲ ಮುಳವಾಡ (ಮಮದಾಪೂರ), ಕಂಕರಪೀರ, ದಸ್ತಗೀರ ಕಲಾದಗಿ, ಹನಿಪ್ ಮಕಾನದಾರ, ಎಂ.ಆರ್. ಕಲಾದಗಿ, ಮಹೇಶ್ ಗಿಡ್ಡಪ್ಪಗೊಳ, ಪ.ಪಂ. ಮುಖ್ಯಾಧಿಕಾರಿ ವಿರೇಶ ಹಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.