ಮಹಲಿಂಗಪುರ

ಸಿದ್ದಾರೂಢರ ಜಯಂತಿ ಕಾರ್ಯಕ್ರಮ ; ಸಿದ್ಧಾರೂಢರು ಜಾತಿ-ಮತ-ಪಂಥ ಮೀರಿನಿಂತ ಜಗದ್ಗುರು : ಸಹಜಾನಂದ ಮಹಾಸ್ವಾಮಿಜಿ

ಸಿದ್ದಾರೂಢರ ಜಯಂತಿ ಕಾರ್ಯಕ್ರಮ ; ಸಿದ್ಧಾರೂಢರು ಜಾತಿ-ಮತ-ಪಂಥ ಮೀರಿನಿಂತ ಜಗದ್ಗುರು : ಸಹಜಾನಂದ ಮಹಾಸ್ವಾಮಿಜಿ

ಮಹಾಲಿಂಗಪುರ: ರಾಮನವಮಿಯಂದು ಜನ್ಮತಾಳಿದ ಸಿದ್ಧಾರೂಢರು ಜಾತಿ-ಮತ-ಪಂಥಗಳನ್ನು ಮೀರಿನಿಂತ ನಿಜವಾದ ಜಗದ್ಗುರುಗಳು ಎಂದು ಸಹಜಾನಂದಸ್ವಾಮಿಜಿ ಹೇಳಿದರು.  

ಪಟ್ಟಣದ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಗುರುವಾರ ರಾತ್ರಿ ಜರುಗಿದ ಜಗದ್ಗುರು ಸಿದ್ಧಾರೂಢರ 187ನೇ ಜಯಂತಿಯ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಗೀತೆಯಲ್ಲಿ ಪರಮಾತ್ಮ ಹೇಳಿದಂತೆ ಭೂಮಿ ಮೇಲೆ ಅಧರ್ಮ ಹೆಚ್ಚಾದಾಗ ಭಗವಂತ ಸಾಧು-ಸಂತರ ಮಹಾನ್ ಪುರುಷರ ರೂಪದಲ್ಲಿ ಜನ್ಮ ತಾಳಿ ಮನುಕುಲವನ್ನು ಉದ್ಧರಿಸುತ್ತಾನೆ. ಅಂತೆಯೆ ಮನುಕುಲದ ಉದ್ಧಾರಕ್ಕಾಗಿ ಜನ್ಮ ತಾಳಿದ ರಾಮಚಂದ್ರರಂತೆ, ಹುಬ್ಬಳ್ಳಿಯ ಸಿದ್ಧಾರೂಢರು, ಶಿರಡಿ ಸಾಯಿಬಾಬಾರು ಜನ್ಮ ತಾಳಿರುವ ರಾಮನವಮಿ ದಿನವು ತ್ರಿವಳಿ ಸಂಗಮದ ಪುಣ್ಯ ದಿನವಾಗಿದೆ.  

ಮಹಾತ್ಮರ ತತ್ವ, ಚಿಂತನೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ದಿನಾಚರಣೆಗಳು ಸಾರ್ಥಕ ಪಡೆಯುತ್ತವೆ. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ, ಮಾನವ ಜನ್ಮವನ್ನು ವ್ಯರ್ಥ ಕಾಲ ಹರಣದಲ್ಲಿ ಕಳೆಯದೇ, ನಿತ್ಯ ಜಪ,ತಪ, ದಾನ, ಧರ್ಮ,ದಾಸೋಹ, ಅಧ್ಯಾತ್ಮ ಚಿಂತನೆಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರನ್ನಬೆಳಗಲಿ ಸದಾಶಿವ ಗುರೂಜಿ, ಮಲ್ಲೇಶಪ್ಪ ಕಟಗಿ ಶರಣರು ಮಾತನಾಡಿ ಜಗದ್ಗುರು ಸಿದ್ಧಾರೂಢರು ಓಂ ನಮಃ ಶಿವಾಯ ಎಂಬ ಮಹಾಮಂತ್ರವನ್ನು ಬಹಿರಂಗವಾಗಿ ಸಾರ್ವತ್ರಿಕರಣಗೊಳಿಸಿ ಮುಮುಕ್ಷುಗಳ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ.ಶ್ರೀಮನ್ನಿಜಗುಣರ ಶಾಸ್ತ್ರಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದ ಆರೂಢರು ನಾಡಿನ ಆಧ್ಯಾತ್ಮ ಕ್ಷೇತ್ರಕ್ಕೆ ಮಹದುಪಕಾರಗೈದು ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಬೆಳಗುತ್ತಿದ್ದಾರೆ. ಮಾನವರು ಧರ್ಮ ಮಾರ್ಗದಲ್ಲಿ ನಡೆದು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು. 

ಚಿಕ್ಕಪಡಸಲಗಿಯ ಮಾತೋಶ್ರೀ ಅಕ್ಕಮಹಾದೇವಿತಾಯಿ, ರನ್ನಬೆಳಗಲಿಯ ವೇದಮೂರ್ತಿ ರಾಚಯ್ಯಸ್ವಾಮಿ ಸಾಲಿಮಠ ಸಿದ್ದಾರೂಢರ ಪವಾಡ ಮತ್ತು ಚರಿತ್ರೆಗಳನ್ನು ತಿಳಿಸಿದರು. ಶಿಕ್ಷಕ ಹುಮಾಯೂನ ಸುತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಿಂದ ಹಮ್ಮಿಕೊಂಡಿದ್ದ ಲಿಖಿತ ಕೋಟಿಜಪಯಜ್ಞ ಕಾರ್ಯಕ್ರಮದಲ್ಲಿ ಅತಿಹೆಚ್ಚು ಜಪಗಳನ್ನು ಬರೆದ ಶಿರನಾಳ ಗ್ರಾಮದ 21, ಮಹಾಲಿಂಗಪುರಸದ ಇಬ್ಬರು ಸದ್ಭಕ್ತರನ್ನು ಸನ್ಮಾನಿಸಲಾಯಿತು.  

ಮುತ್ತೈದೆಯರು ತೊಟ್ಟಿಲ ತೂಗಿ ಸಿದ್ಧಾರೂಢರ ನಾಮಕರಣ ಮಹೋತ್ಸವ ನೆರವೇರಿಸಿದರು. ಮೂರನೇ ವರ್ಷದ ಲಿಖಿತ ಕೋಟಿ ಜಪಯಜ್ಞದ ಓಂ ನಮ: ಶಿವಾಯ ಮಹಾಮಂತ್ರದ ಪುಸ್ತಕವನ್ನು ಸಹಜಾನಂದ ಸ್ವಾಮಿಜಿ ಬಿಡುಗಡೆಗೊಳಿಸಿದರು. ಕು.ಆರೂಢ ಚೇತನ ಕಟಗಿ ಇತನ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

ಸಿದ್ದಾರೂಢ ಟ್ರಸ್ಟ್‌ ಕಮಿಟಿಯ ಉಪಾಧ್ಯಕ್ಷ ಡಾ.ಬಿ.ಡಿ ಸೋರಗಾಂವಿ, ಕಾರ್ಯದರ್ಶಿ ಚಂದ್ರಶೇಖರ ಮೋರೆ,  ಧರ್ಮದರ್ಶಿಗಳಾದ ಅಲ್ಲಪ್ಪ ಗುಂಜಿಗಾಂವಿ, ಮಲ್ಲಪ್ಪ ಭಾಂವಿಕಟ್ಟಿ, ಚೇತನ ಹಾದಿಮನಿ, ಗೋಲೇಶ ಅಮ್ಮಣಗಿ, ಲಕ್ಕಪ್ಪ ಚಮಕೇರಿ ಹಾಗೂ ಸದ್ಭಕ್ತರಾದ ಚನಬಸು ಹುರಕಡ್ಲಿ, ಎಸ್‌.ಕೆ.ಗಿಂಡೆ, ಮಹೇಶ ಬಡಿಗೇರ, ಮಲ್ಲಪ್ಪ ಯಾದವಾಡ, ಮಹಾಲಿಂಗ ಕರೆಹೊನ್ನ, ಹನಮಂತ ಮೀರಾಪಟ್ಟಿ, ಶ್ರೀಕಾಂತ ಪರೀಟ, ಚಂದ್ರು ಕದ್ದಿಮನಿ, ಸಿದ್ದು ದಢೂತಿ, ಸುಭಾಸ ನಾಯಕ, ಸದಾಶಿವ ಇಂಗಳಗಿ, ಶ್ರೀಕಾಂತ ಮುಕರೆ, ಸುಭಾಸ ನಾಯಕ ಸೇರಿದಂತೆ ಕಲಬುರಗಿ, ಶಿರನಾಳ, ಯಕ್ಸಂಬಾ, ಖಾನಟ್ಟಿ, ಬನಹಟ್ಟಿ ಗ್ರಾಮಗಳ ನೂರಾರು ಸದ್ಭಕ್ತರು ಭಾಗವಹಿಸಿದ್ದರು. 


ಸುದ್ದಿ ಓದಿ