ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ತೆರವು: ಮರುಸ್ಥಾಪನೆಗೆ ಆಗ್ರಹ
ಶಿಗ್ಗಾವಿ 24 : ಕಲಬುರಗಿಯಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸಿರುವ ತಾಲ್ಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಚಂದ್ರಶೇಖರ ಮಾಯಣ್ಣ, ಪ್ರತಿಮೆಯನ್ನು ಕೂಡಲೇ ಅದೇ ಸ್ಥಳದಲ್ಲಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಲಬುರಗಿಯಲ್ಲಿ ಪ್ರತಿಮೆ ಸ್ಥಾಪಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಏಕಾಏಕಿ ಪ್ರತಿಮೆಯನ್ನು ತೆರವುಗೊಳಿಸಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು. ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಲಬುರಗಿಯ ತೆರವು ವೃತ್ತಕ್ಕೆ ‘ಸಿದ್ದರಾಮಯ್ಯ ವೃತ್ತ’ ಎಂದು ನಾಮಕರಣ ಮಾಡಿದ್ದರು.
ಬಳಿಕ ಅಲ್ಲಿ ನಾಮಫಲಕವನ್ನೂ ಅಳವಡಿಸಲಾಗಿತ್ತು. ಇದೀಗ ಪ್ರತಿಮೆಯನ್ನೂ ತೆರವುಗೊಳಿಸಿರುವುದು ಸಮಾಜದ ನಾಯಕರಿಗೆ ಪದೇಪದೇ ಅವಮಾನ ಮಾಡಿದಂತಾಗಿದೆ ಎಂದು ಚಂದ್ರಶೇಖರ ಮಾಯಣ್ಣ ಆರೋಪಿಸಿದರು.
ಪ್ರತಿಮೆಯನ್ನು ಮರುಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದಾರೆ. ಅಲ್ಲದೆ ಕಲಬುರಗಿಯಲ್ಲಿ ‘ಚಲೋ ಕಲಬುರಗಿ’ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.