ಬೆಳಗಾವಿಯ ಜಿಮಖಾನಾ ಕ್ಲಬ್‌ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು

ಬೆಳಗಾವಿಯ ಜಿಮಖಾನಾ ಕ್ಲಬ್‌ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು

ಬೆಳಗಾವಿ ನಗರದ ಪೊಲೀಸ್ ಕಮೀಷನರ್ ಕಚೇರಿ ಸಮೀಪದ ಜಿಮಖಾನಾ ಕ್ಲಬ್‌ನಲ್ಲಿ ಮಂಗಳವಾರ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ರಮ್ಮಿ ಆಡುತ್ತಿದ್ದ ವೇಳೆ ಸುರೇಶ್ ಜಾಲಗಾರ ಎಂಬಾತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳು ಮೊದಲು ಗನ್‌ನಿಂದ ತಲೆಗೆ ಹೊಡೆದು ಬಳಿಕ ಗುಂಡು ಹಾರಿಸಲು ಯತ್ನಿಸಿದ್ದಾರೆ. ಆದರೆ ಸುರೇಶ್ ಅವರನ್ನು ತಳ್ಳಿ ತಪ್ಪಿಸಿಕೊಂಡು ಸ್ಥಳದಿಂದ ಪಾರಾಗಿದ್ದಾರೆ.

     ಸುರೇಶ್ ತಪ್ಪಿಸಿಕೊಂಡ ಬಳಿಕ ದುಷ್ಕರ್ಮಿಗಳು ಕ್ಲಬ್‌ನ ಹೊರಭಾಗದಲ್ಲಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

     ಮಾಹಿತಿಯ ಪ್ರಕಾರ, ಐವರು ದುಷ್ಕರ್ಮಿಗಳು ಜಿಮಖಾನಾ ಕ್ಲಬ್‌ಗೆ ಬಂದಿದ್ದು, ಅವರಲ್ಲಿ ಇಬ್ಬರು ಹೊರಗಡೆ ನಿಂತರೆ, ಮೂವರು ಒಳಗೆ ಪ್ರವೇಶಿಸಿ ದಾಳಿ ನಡೆಸಿದ್ದಾರೆ.

    ಘಟನೆಯ ಮಾಹಿತಿ ತಿಳಿದು ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಬರಮನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

   ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುರೇಶ್ ಜಾಲಗಾರ ಓಡಿ ಬಂದು ಪೊಲೀಸರ ಆಶ್ರಯ ಪಡೆದಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಿಂದೆ ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಸುರೇಶ್ ಜಾಲಗಾರ ಗುಂಡಿನ ದಾಳಿ ನಡೆಸಿದ್ದ ಎನ್ನಲಾಗಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಫುಲ್ ಪಾಟೀಲ್ ಪರದವರೇ ಈ ದಾಳಿ ನಡೆಸಿದ್ದಾರೆ ಎಂದು ಸುರೇಶ್ ಪೊಲೀಸರಿಗೆ ತಿಳಿಸಿದ್ದಾರೆ.

   ಘಟನೆ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಓದಿ