ಹಿರಿಯ ನಟಿ ಅಭಿನಯ ಶಾರದೆ ಜಯಂತಿ ವಿಧಿವಶ
ಬೆಂಗಳೂರು, ಜುಲೈ 26ಚಂದನವನದ ಹಿರಿಯ ತಾರೆ, ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 76 ವರ್ಷ ವಯಸ್ಸಾಗಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ 1945, ಜನವರಿ 6ರಂದು ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. 60ರಿಂದ 80ರ ದಶಕಗಳವರೆಗೆ ಸ್ಯಾಂಡಲ್ವುಡ್ನಲ್ಲಿ ನಾಯಕನಟಿಯಾಗಿ ಜನರನ್ನ ಪುಳಕಿತಗೊಳಿಸಿದ್ದ ಜಯಂತಿ ಅವರು ಕನ್ನಡ ಮಾತ್ರವಲ್ಲದೆ ಇನ್ನೂ ಐದು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಹಲವು ಬಾರಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪುರಸ್ಕಾರಗಳನ್ನ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಬೋಲ್ಡ್ ಅಂಡ್ ಬ್ಯೂಟಿಫುಲ್ಎಂದು ಖ್ಯಾತರಾಗಿದ್ದ ಅವರಿಗೆ ಅಭಿನಯ ಶಾರದೆ ಬಿರುದು ಕೂಡ ಚಿತ್ರರಂದವರು ನೀಡಿದ್ದರು.
1963ರಲ್ಲಿ ಬಿಡುಗಡೆಯಾದ ಜೇನು ಗೂಡು ಸಿನಿಮಾ ಜಯಂತಿ ಅವರ ಚೊಚ್ಚಲ ಕನ್ನಡ ಚಿತ್ರ. ಅದಕ್ಕೂ ಮುನ್ನ 1960ರಲ್ಲಿ ಬಿಡುಗಡೆಯಾದ ಯಾನೈ ಪಾಗನ್ ತಮಿಳು ಚಿತ್ದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಆನಂತರ ಸ್ಯಾಂಡಲ್ವುಡ್ನ ಜೇನುಗೂಡಿಗೆ ಕೈ ಹಾಕಿದರು. ಸ್ಯಾಂಡಲ್ವುಡ್ನಲ್ಲಿ ತಮ್ಮ ಅದ್ಭುತ ನಟನೆಯಿಂದ ಎರಡು ದಶಕಗಳ ಕಾಲ ಮೋಡಿ ಮಾಡಿ ಎಂಬತ್ತರ ದಶಕದ ನಂತರ ಅವರು ಪೋಷಕ ಪಾತ್ರಗಳಲ್ಲಿ ನಟಿಸತೊಡಗಿದ್ದರು. 2011ರಲ್ಲಿ ಅವರು ಕೊನೆಯ ಸಿನಿಮಾ ನಟಿಸಿದ್ದು. ನಮಿತಾ ಐ ಲವ್ ಯೂ ಬಳಿಕ ಅವರು ಮತ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ.