ಹಿಂದುತ್ವ ವಿರುದ್ದದ ಹೇಳಿಕೆ ಸಾಬೀತಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ, ಆಗದಿದ್ದಲ್ಲಿ ನಿಮ್ಮ ನಡೆ ಏನು ಹೇಳಿ : ಆರೋಪಿಸುವರಿಗೆ ಸತೀಶ ಜಾರಕಿಹೊಳಿ ಓಪನ್ ಚಾಲೇಂಜ್

ಹಿಂದುತ್ವ ವಿರುದ್ದದ ಹೇಳಿಕೆ ಸಾಬೀತಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ, ಆಗದಿದ್ದಲ್ಲಿ ನಿಮ್ಮ ನಡೆ ಏನು ಹೇಳಿ : ಆರೋಪಿಸುವರಿಗೆ ಸತೀಶ ಜಾರಕಿಹೊಳಿ ಓಪನ್ ಚಾಲೇಂಜ್

ಬೆಳಗಾವಿ, ನ, 8 : ನಿಪ್ಪಾಣಿಯಲ್ಲಿ ಜರುಗಿದ ಕಾರ್ಯಕ್ರಮದ ಭಾಷಣದಲ್ಲಿ ನಾನು ಯಾವದೇ ಜಾತಿ ಅಥವಾ ಧರ್ಮಕ್ಕೆ ನೋವು ಉಂಟು ಮಾಡುವ ಬಗ್ಗೆ ನಾನು ಮಾತುನಾಡಿಲ್ಲ. ಈ ಬಗ್ಗೆ ಆರೋಪ ಮಾಡುತ್ತಿರುವವರು ನಾನು ಯಾವದೇ ಧರ್ಮಕ್ಕೆ ಅವಹೇಳನ ಮಾಡಿರುವದನ್ನು ಸಾಬೀತು ಮಾಡಿದರೆ ನಾನು ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಆದರೆ ಆರೋಪಿಸುವವರ ಆರೋಪ ಸುಳ್ಳು ಆದಲ್ಲಿ ಅವರ ಮುಂದಿನ ನಡೆ ಏನು ಎನ್ನುವದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಆರೋಪ ಮಾಡುವವರಿಗೆ ಸವಾಲ್ ಹಾಕಿದ್ದಾರೆ.

    ನಗರದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ನನ್ನ ಹಿಂದೂ ಶಬ್ದದ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ಒಂದು ಕಮೀಟಿ ರಚನೆ ಮಾಡಲಿ. ಈ ಸಮೀತಿ ಒಂದು ತಿಂಗಳಲ್ಲಿ ವರದಿ ಕೊಟ್ಟು, ಸಾಬೀತು ಮಾಡಿದ್ರೆ ಕ್ಷಮೆ ಅಲ್ಲ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬಹಿರಂಗ ಸವಾಲೆಸೆದರು.

    ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಇದು ಕೂಡಾ 1964ರಲ್ಲಿರುವ ಡಿಕ್ಷನರಿಯಲ್ಲಿ ಇದೆ. ಬೇಕಿದ್ದರೆ ಅದನ್ನು ತೆಗೆದುನೋಡಲಿ. ಮುಖ್ಯವಾಗಿ ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

     ಬಹಿರಂಗ ಚರ್ಚೆಗೆ ಬಂದರೆ ಸಿದ್ಧ : ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬ ಅರ್ಥವಿದೆ. ಶಬ್ದಕೋಶ ಮತ್ತು ವಿಕಿಪೀಡಿಯಾದಲ್ಲಿ ಇರುವುದನ್ನೇ ನಾನು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಗೆ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ.

      ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ಅವರು, ಹಿಂದೂ ಶಬ್ದಕ್ಕೆ ಅಶ್ಲೀಲ ಎನ್ನುವ ಅರ್ಥವಿದೆ ಎಂದು ನಾನು ಹೇಳಿದ ಬಳಿಕ ನನ್ನ ಹೇಳಿಕೆಯನ್ನು ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ. ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸುತ್ತಿದ್ದಾರೆ. ಹಿಂದೂ ಶಬ್ದವು ಪರ್ಷಿಯನ್ ಭಾಷೆಯಿಂದ ಬಂದಿದ್ದು ಎಂದು ನಾನು ಹೇಳಿದ್ದೇನೆ. ಅವರು ಕೆಟ್ಟ ಶಬ್ದ ಬಳಸಿದ್ದಾರೆ ಅಂತ ನಾವು ಹೇಳಬೇಕಿತ್ತು. ಆದರೆ ಇವರು ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿದ್ದನ್ನೇ ದೊಡ್ಡದು ಮಾಡಿಕೊಂಡು ಕುಳಿತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.

     ಬಹಿರಂಗ ಚರ್ಚೆ ಬರುವುದಾದ್ರೆ ಹೊರಗಡೆ ಬಂದು ಚರ್ಚೆ ಮಾಡಲಿ, ನಮ್ಮ ಕಡೆಯ ಪರಿಣಿತರು ಬರುತ್ತಾರೆ, ಅವರ ಕಡೆಯ ಪರಿಣಿತರು ಬರಲಿ. ನ್ಯೂಟ್ರಲ್ ಇದ್ದವರು ಇದ್ದಾರೆ. ಒಂದು ಸಾಮೂಹಿಕ ಚರ್ಚೆಯಾಗಲಿ. ನಾಲ್ಕು ಮಂದಿ ಯಾರೋ ಚರ್ಚೆ ಮಾಡಿದ್ರೆ ಅದು ಅಂತಿಮ ನಿರ್ಣಯ ಆಗೋದಿಲ್ಲ. ಸ್ವತಂತ್ರ ವೇದಿಕೆ ಮೇಲೆ ಚರ್ಚೆಯಾಗಲಿ, ಅಂದಾಗ ಅದಕ್ಕೊಂದು ಮಹತ್ವ ಬರುತ್ತದೆ ಎಂದು ಸವಾಲು ಹಾಕಿದರು. ಸತ್ಯ ಹೇಳುವುದೇ ಅಪರಾಧ, ನೊಂದವರಿಗೆ ನ್ಯಾಯ ಕೊಡಿಸುವುದೇ ಅಪರಾಧವಾಗಿದೆ. ಹಿಂದೂ ಪರ್ಷಿಯನ್ ಶಬ್ದ ಎಂದು ಹೇಳಿದ್ದು, ಆ ಬಗ್ಗೆ ಚರ್ಚೆಯಾಗಲಿ. ಸತೀಶ ಜಾರಕಿಹೊಳಿ ಸಂಶೋಧನೆ ಮಾಡಿದ ಗ್ರಂಥವಲ್ಲ. ಆದರೆ ಈ ಬಗ್ಗೆ ಚರ್ಚೆಯಾಗಲಿ ಎನ್ನುವುದು ನನ್ನ ಅಭಿಪ್ರಾಯ.

        ಜಾರಕಿಹೊಳಿ ಕುಟುಂಬದ ಮೇಲೆ ಟಾರ್ಗೆಟ್ ಮಾಡುವುದು ಹೊಸದೆನಲ್ಲ : ಜಾರಕಿಹೊಳಿ ಕುಟುಂಬವನ್ನು ಬೆಳಗಾವಿಯಲ್ಲಿ ಸ್ವಲ್ಪ ಸಮುದಾಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಇದು ಹೊಸದು ಏನೂ ಇಲ್ಲ, ಇದರ ಅನುಭವ ನಮಗೆ 30 ವರ್ಷಗಳಿಂದ ಆಗಿದೆ. ಲೇಬಲ್ ಅಷ್ಟೇ ಬದಲಾವಣೆ ಆಗುತ್ತದೆ. ಗಾಡಿ, ಮಂದಿ ಅವರೇ ಇರುತ್ತಾರೆ. ಬೆಳಗಾವಿ ಟೂ ಗೋಕಾಕ್, ಗೋಕಾಕ್ ಟೂ ಬೆಳಗಾವಿ ಗಾಡಿ ಹೋಗುತ್ತಿರುತ್ತದೆ. ಮತ್ತೆ ಬೈಲಹೊಂಗಲ ಕಡೆಗೂ ಓಡುತ್ತಿರುತ್ತದೆ. ಜಾರಕಿಹೊಳಿ ಗಾಡಿಯಲ್ಲಿ ಎಲ್ಲಾ ಪಕ್ಷದವರು ಕುಳಿತುಕೊಂಡಿರುತ್ತಾರೆ ಎಂದು ನುಡಿದರು.

ಸುದ್ದಿ ಓದಿ