ಕಥೆ ಮತ್ತು ವಿಶೇಷ ಲೇಖನಗಳು

ಸಾತಜ್ಜಿ ಕಥೆ

ಸಾತಜ್ಜಿ ಕಥೆ

-ಅನಿತಾ ಮಾಲಗತ್ತಿ

ಸದಾಶಿವನಗರ, ಬೆಳಗಾವಿ 

ಬಹಳ ದಿನಗಳ ಹಿಂದೆ ಹೀಗೊಂದು ಊರಿನಲ್ಲಿ ಸಾತಜ್ಜಿ ವಾಸವಾಗಿದ್ದಳು. ತನ್ನ ಪುಟ್ಟಗುಡಿಸಲಿನ ಸುತ್ತ ಮುತ್ತಲೂ ಕೆಲವು ತರಕಾರಿ, ಹೂವಿನ ಗಿಡಗಳನ್ನು ಬೆಳೆಸಿದ್ದಳು. ನಿತ್ಯವೂ ಸ್ನಾನ, ಪೂಜಾ ಕಾರ್ಯಗಳನ್ನು ಪೂರೈಸಿ ಬೆಳಗಿನ ತಿಂಡಿ ತೀರ್ಥ ಮುಗಿಸಿಕೊಂಡು ಹಿಂದಿನ ರಾತ್ರಿ ಕಟ್ಟಿ ಇಟ್ಟಿರುವ ಹೂ ಮಾಲೆ ಮತ್ತು ತರಕಾರಿಗಳನ್ನು ಬುಟ್ಟಿಯಲ್ಲಿ ಹೊತ್ತು ದೂರದ ಪೇಟೆಗೆ ಹೋಗಿ ಸಂಜೆಯವರೆಗೆ ಮಾರಿಕೊಂಡು ಬರುವಾಗ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ಬುಟ್ಟಿ ಹೊತ್ತು ಬರುತ್ತಿದ್ದಳು. ಅವಳಿಗೆ ಒಬ್ಬ ಮಗ ಮತ್ತು ಸೊಸೆ ಇದ್ದರು. ಆದರೆ ಅವರೀರ್ವರೂ ಅಪಘಾತವೊಂದರಲ್ಲಿ ಶಿವನ ಪಾದ ಸೇರಿದ್ದರು. ಅವರ ಒಬ್ಬನೇ ಮಗ ರುದ್ರನು ಸಾತಜ್ಜಿಗೆ ಜೊತೆಯಾಗಿದ್ದನು. ರುದ್ರ ತುಂಬಾ ಮರೆಗುಳಿ ಮತ್ತು ಸೋಮಾರಿಯಾಗಿದ್ದನು. ಜೊತೆಗೆ ಕೂತುಂಡು ಹೊಟ್ಟೆ ಡುಮ್ಮನೂ ಆಗಿದ್ದ. ಸಾತಜ್ಜಿಯನ್ನು ಬೆಳಗಿನಿಂದ ಗೋಳು ಹೊಯ್ದುಕೊಳ್ಳುತ್ತಿದ್ದ. ಗಿಡಗಳಿಗೆ ನೀರುಣಿಸು ಎಂದರೆ ಹೂಂ ಎಂದು ಮರೆತುಬಿಡುತ್ತಿದ್ದ. ಸಂತೆಗೆ ಕರೆದೊಯ್ದರೆ ಅಲ್ಲಿಯೂ ಗಿರಾಕಿಗಳಿಂದ ಸರಿಯಾಗಿ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಬಿಸಿಲಿರಲಿ, ಮಳೆ ಸುರಿಯುತಿರಲಿ, ಚಳಿ ಇರಲಿ ಸಾತಜ್ಜಿಯೇ ಮುತುವಜರ್ಿ ವಹಿಸಿ ವ್ಯಾಪಾರ ಮಾಡಬೇಕಾಗಿತ್ತು. ಇವನ ಸೋಮಾರಿತನ ಮತ್ತು ಮರೆಗುಳಿತನದಿಂದ ಬೇಸತ್ತ ಸಾತಜ್ಜಿ ಅವನ ಭವಿಷ್ಯ ಕುರಿತು ದಿನವೂ ಯೋಚಿಸುತ್ತಿದ್ದಳು. ಹೀಗಿರುವಾಗ,

ದಿನಗಳೆದಂತೆ ರುದ್ರ ಬೆಳೆದು ದೊಡ್ಡವನಾದ. ಮದುವೆ ವಯಸ್ಸಿಗೂ ಬಂದ ಪೇಟೆಯಲ್ಲಿ ಒಬ್ಬ ಸುಂದರಿಯನ್ನು ನೋಡಿದ. ಲಂಗ ದಾವಣಿ ಹೊತ್ತು ಉದ್ದವಾದ ಜಡೆ ತಲೆ ತುಂಬಾ ಹೂ ಮುಡಿದು, ಮಲ್ಲಿಗೆಯಂಥ ಹಲ್ಲುಗಳನ್ನು ಅರಳಿಸಿ ಬಾಯ್ತುಂಬಾ ನಗುವ ಅವಳಿಗೆ ಮನಸೋತ ನಾಲ್ಕಾರು ಬಾರಿ ನೋಡಿದ ಮೇಲೆ ತಾನು ಮದುವೆಯಾಗುವುದಾದರೆ ಇವಳನ್ನೇ ಆಗಬೇಕೆಂದುಕೊಂಡು ತನ್ನ ಮನದಿಂಗಿತವನ್ನು ಅಜ್ಜಿ ಕಡೆಗೆ ಹೇಳಿಕೊಂಡ. ಅಜ್ಜಿಯೂ ಅವಳನ್ನು ನೋಡಿದ್ದಳು. ಹಾಗೆಯೇ ರುದ್ರನಿಗೆ ಅವಳ ಮೇಲೆ ಮನಸ್ಸಾಗಿದೆ ಎಂಬುದನ್ನು ಅರಿತಿದ್ದಳು. ಅದು ಅವಳ ವಯಸ್ಸಿನ ಅನುಭವ!

"ನನಗೆ ಎರಡು ದಿನ ಸಮಯ ಕೊಡು" ಎಂದು ಕೇಳಿಕೊಂಡಳು ಅಜ್ಜಿ. ರುದ್ರ ಉಬ್ಬಿ ಹೋದ. ಅಜ್ಜಿ ಹಿಡಿದ ಕೆಲಸ ಬಿಡುವವಳಲ್ಲ. ಅದಕ್ಕಾಗಿ ಅವಳಲ್ಲಿ ತುಂಬ ನಂಬಿಕೆ ರುದ್ರನಿಗೆ. ಸಮಯವನ್ನೇನೋ ತೆಗೆದುಕೊಂಡಳು ಸಾತಜ್ಜಿ. ಆದರೆ ಮಾಡುವುದೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಚಿಂತಿತಳಾದಳು. ಕೊನೆಗೊಂದು ನಿಧರ್ಾರಕ್ಕೆ ಬಂದಳು. 

ನೀನು ಆ ಸುಂದರಿಯನ್ನು ಮದುವೆಯಾಗುವುದಾದರೆ ನನ್ನ ಕೆಲವು ಷರತ್ತುಗಳಿವೆ. ನಾನು ಹೇಳಿದಂತೆ ನೀನು ಕೇಳಬೇಕು ಎಂದಳು. ಸದಾ ಸುಂದರಿಯ ಗುಂಗಿನಲ್ಲೇ ಇದ್ದ ರುದ್ರ "ಹೇಳಜ್ಜೀ" ಎಂದ. "ಮಾತಿಗೆ ತಪ್ಪಬಾರದು, ನಿಯಮ ಪಾಲಿಸಬೇದು, ಅರ್ಧಕ್ಕೇ ಬರಬಾರದು" ಎಂದು ಮಾತು ತೆಗೆದುಕೊಂಡಳು.

ನಾನು ರಾತ್ರಿಯೆಲ್ಲ ಮಂತ್ರಿಸಿ ಇಟ್ಟ ಈ ಹಣ್ಣುಗಳನ್ನು ತೆಗೆದುಕೋ ಇಲ್ಲಿಂದ 32 ಫಲರ್ಾಂಗ್ ಕ್ರಮಿಸಿದರೆ ಕಾಡು ಶುರುವಾಗುತ್ತದೆ. ಎರಡು ಫಲರ್ಾಂಗಿಗೆ ಒಂದರಂತೆ ಬೇವಿನ ಮತ್ತು ಆಲದ ಮರ ಕೂಡಿ ಬೆಳೆದಿವೆ. ಅವೆರಡು ಕೂಡಿ ಬೆಳೆದ ಮರದ ಕೆಳಗೆ ಒಂದು ಹಣ್ಣನ್ನು ಇಡಬೇಕು ಎಂದು ತಿಳಿಸಿದಳು. (ಆದರೆ ಕಾಡು ತುಂಬಾ ದೊಡ್ಡದಿದ್ದು ಕಾಡಿನ ತುಂಬಾ ಆಲ ಮತ್ತು ಬೇವಿನ ಮರಗಳಿರುವುದು ಅಜ್ಜಿಗೆ ಮೊದಲೇ ಗೊತ್ತಿತ್ತು) ನಂತರ ಆ ಹಣ್ಣನ್ನು ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಸೇವಿಸುವುದನ್ನು ಅಥವಾ ಹೊತ್ತೊಯ್ಯುವುದನ್ನು ಕಾದು ನೋಡಿ ಅಲ್ಲಿಂದ ಮುಂದೆ ಪ್ರಯಾಣಿಸಬೇಕು. ಹಣ್ಣನ್ನು ಇಡುವಾಗ "ದೇವಾ ನನಗೆ ಆ ಸುಂದರಿಯನ್ನು ಹೆಂಡತಿಯನ್ನಾಗಿಸು ನಿನಗೆ ಇದು ಕಾಣಿಕೆ" ಎಂದು ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ಬೇಡಿಕೋ. ಅವಸರ ಬೇಡ, ನಂಬಿಕೆ ಇರಲಿ, ಅನುಮಾನ ಸುಳಿಯದಿರಲಿ. ಹಾದಿಗೆ ಬೇಕಾದ ಊಟ ತಿಂಡಿ ಇದರಲ್ಲಿ ಇದೆ. ನೆನಪಿರಲಿ ನಿನಗೆ ಆ ಸುಂದರಿಯೇ ಬೇಕೆಂದರೆ ಅರ್ಧಕ್ಕೇ ಬರುವಂತಿಲ್ಲ ಎಂದು ಎಚ್ಚರಿಸಿ ಕಳುಹಿಸಿಕೊಟ್ಟಳು. 

ತುಂಬಾ ಖುಷಿಯಿಂದ ಸಾಗಿ ಅಜ್ಜಿ ಹೇಳಿದಂತೆ ಮರ ಹುಡುಕಿ ಹಣ್ಣನ್ನು ಇಟ್ಟು ಬೇಡಿಕೊಂಡು ಹಕ್ಕಿ ಬರುವವರಿಗೂ ಕಾದು ಸಾಗಿದ. ಕೆಲವು ಕಡೆ ಪ್ರಾಣಿಗಳು ಬಂದು ಕಬಳಿಸಿದವು. ಕಾಡಿನ ಮಧ್ಯೆ ಅಲ್ಲಲ್ಲಿ ಹರಿಯುವ ಝರಿಗಳಲ್ಲಿ ಮಿಂದು ಅಜ್ಜಿ ಕೊಟ್ಟ ತಿಂಡಿ ತಿನಿಸು ತಿಂದು ನೀರು ಕುಡಿದು ಸಾಗುತ್ತಿದ್ದ. ಕೆಲವು ಕಡೆ ಕಾಡು ಪ್ರಾಣಿಗಳಿಂದ ಭಯ ಭೀತನಾಗಿ ಓಡಿದ, ತನಗೆ ತಿಳಿಯದಂತೆ ಮರ ಏರಿ ಕುಳಿತಿದ್ದ! ಆರಂಭದಲ್ಲಿ ಮರ ಹುಡುಕುವುದು, ಹಣ್ಣನ್ನು ಕಾಯುವುದು ಸಾಕಾಗುತ್ತಿತ್ತು. ಆದರೂ ಹಣ್ಣು ಇಟ್ಟು ಸುಂದರಿಯನ್ನು ನೆನೆದು ದೇವರಲ್ಲಿ ಬೇಡಿಕೊಳ್ಳುವಾಗ ಆಯಾಸ ಮರೆತುಬಿಡುತ್ತಿದ್ದ. ಕೊನೆಕೊನೆಗೆ ಹುಡುಕುವಲ್ಲಿ, ಕಾಯುವಲ್ಲಿ, ಸಹನೆ, ತಾಳ್ಮೆ ಅವನಿಗರಿವಿಲ್ಲದೇ ಮೈಗೂಡಿದವು. ನಡೆದು ನಡೆದು, ಓಡಿ ಓಡಿ ಸಣ್ಣಗಾದ. ಹೊಟ್ಟೆಯೂ ಕರಗಿ ಸಪೂರಾದ. ಮುಖದಲ್ಲಿ ತೇಜಸ್ಸು ಕಾಣತೊಡಗಿತು.

ಇತ್ತ ಊರೊಳಗೆ ಸಾತಜ್ಜಿ ಆ ಸುಂದರಿಯನ್ನು ಕಂಡು ಪರಿಚಯ ಮಾಡಿಕೊಂಡಳು. ನಿಧಾನವಾಗಿ ವಿಷಯವನ್ನು ನನ್ನ ಮೊಮ್ಮಗ ತುಂಬಾ ಒಳ್ಳೆಯವ ಸ್ವಲ್ಪ ತಾಳ್ಮೆ ಕಡಿಮೆ ಮತ್ತು ಸೋಮಾರಿ ಅದಕ್ಕಾಗಿ ಒಂದು ಪರೀಕ್ಷೆ ಇಟ್ಟಿರುವೆ. ಅವನು ಗೆದ್ದು ಬಂದರೆ ನೀನು ಮದುವೆಯಾಗು ಮನೆಯಲ್ಲಿ ಬೇರೆ ಯಾರೂ ಇಲ್ಲ ನಾನು, ನೀನು, ನನ್ನ ಮೊಮ್ಮಗ ಅಷ್ಟೇ. ಮುಂದೆ ನಾಲ್ಕಾರು ಮೊಮ್ಮಕ್ಕಳು ನೀನು ಮನಃಪೂರ್ವಕವಾಗಿ ಒಪ್ಪಿದರೆ ಮಾತ್ರ ಎಂದು ತನ್ನ ಸಿಹಿ ಮಾತಿನಿಂದ ಕೇಳಿದಳು.

ಸಂತೆಯಲ್ಲಿ ಅಜ್ಜಿಯೊಂದಿಗೆ ಬರುತ್ತಿದ್ದ ಮೊಮ್ಮಗನನ್ನು ಆಗಾಗ ತನ್ನ ಓರೆಗಣ್ಣಿನಿಂದ ಗಮನಿಸಿದ್ದ ಸುಂದರಿ "ನನ್ನವ್ವ ಮತ್ತು ನನ್ನಪ್ಪ ಒಪ್ಪಿದರೆ ಮಾತ್ರ ಎಂದು ಒಪ್ಪಿಗೆಯನ್ನು ಕೊಟ್ಟಳು. ಅಜ್ಜಿಗೆ ಇನ್ನೂ ಧೈರ್ಯ ಬಂದು ಸುಂದರಿಯ ತಂದೆ ತಾಯಿಗಳೊಂದಿಗೆ ಮಾತನಾಡಿ ಅವರ ಒಪ್ಪಿಗೆಯನ್ನೂ ಪಡೆದು ತನ್ನ ಮೊಮ್ಮಗನ ದಾರಿ ನೋಡುತ್ತಾ ಅವನು ಗೆದ್ದು ಬರಲೆಂದು ದೇವರಲ್ಲಿ ಪ್ರಾಥರ್ಿಸುತ್ತಾ ಕುಳಿತಳು 

ನಸುಕಿನ ವೇಳೆಯಲ್ಲಿ "ಅಜ್ಜಿ" ಎಂಬ ಕೂಗಿಗೆ ಸಾತಜ್ಜಿ ಗಡಬಡಿಸಿ ಎದ್ದು ಬಾಗಿಲು ತೆರೆದಳು. ಅವಳೆದೆ ಅವಳಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಏಕೆಂದರೆ ಅದು ರುದ್ರನ ಧ್ವನಿಯೇ ಎಂದು ಮನ ಕೂಗಿ ಕೂಗಿ ಹೇಳಿತ್ತು. ಕದ ತೆರೆದವಳೇ ಮೊಮ್ಮಗನನ್ನು ಬಿಗಿದಪ್ಪಿ ಸಾತಜ್ಜಿ ಕಣ್ಣೀರು ಹಾಕಿದಳು. "ನಿನಗೆ ಕಷ್ಟ ಕೊಟ್ಟೆ ನನ್ನಪ್ಪ ಎಂದು ಅಳುತ್ತಿದ್ದಾಗ ರುದ್ದನು ನಗುತ್ತ, 

"ಎಲ್ಲಿ ಕಷ್ಟ ಅಜ್ಜಿ ನೋಡು ನಾನೀಗ ಉತ್ತಮ ಜೀವನ ನಡೆಸಲು ಬೇಕಾದ ಎಲ್ಲಾ ಮಾರ್ಗದರ್ಶನವನ್ನು ಪಡೆದು ಬಂದಿದ್ದೇನೆ. ಇನ್ನು ಮುಂದೆ ನಾನು ಸೋಮಾರಿಯಾಗಿ ಕಾಲ ಕಳೆಯುವುದಿಲ್ಲ. ನೀನು ಮನೆಯಲ್ಲಿಯೇ ಇರು. ನಾನು ಸಂತೆಗೆ ಹೋಗಿ ದುಡಿದು ತರುತ್ತೇನೆ. ನೋಡು ನಾನೀಗ ಎಷ್ಟೊಂದು ಸಪೂರಾಗಿದ್ದೇನೆ. ಮದುಮಗ ಇಷ್ಟಿದ್ದರೆ ಸಾಲದೇ" ಎನ್ನುತ್ತಾ ಅಂದ ಹಾಗೆ ಸುಂದರಿ ಸಿಕ್ಕಳಾ? ಪ್ರಶ್ನಿಸಿದ.

ಹೋಂ ಸಿಕ್ಕಳು ಎಂಬ ಅಜ್ಜಿಯ ಉತ್ತರಕ್ಕೆ ಇದ್ದಕ್ಕಿದ್ದಂತೆ ರುದ್ರ ಸಣ್ಣ ಮುಖ ಮಾಡಿ ಅಜ್ಜಿ ಆ ಸುಂದರಿ ನನ್ನನ್ನು ತಿರಸ್ಕರಿಸಿದರೆ... ಎಂದ. ಅಜ್ಜಿ ಬಾಯ್ತುಂಬಾ ನಕ್ಕು ಹಾಗೆನೂ ಇಲ್ಲ ಎನ್ನುತ್ತಾ ನಡೆದ ವೃತ್ತಾಂತವನ್ನೆಲ್ಲ ತಿಳಿಸುತ್ತಾ ಬಿಸಿಬಿಸಿ ಅಡುಗೆ ಮಾಡಿ ಬಡಿಸಿದಳು. 

ಹಾಂ, ರುದ್ರ-ಸುಂದರಿಯರ ವಿವಾಹ ಸರಳವಾಗಿ ನೆರವೇರಿತು. ಅಂದಹಾಗೆ ಆ ಸುಂದರಿಯ ಹೆಸರು "ದೇವಿ" ತುಂಬು ಸಂಸಾರದಲ್ಲಿ ಮರಿಮಗನನ್ನು ಎತ್ತಿಕೊಳ್ಳುವ ಕನಸಿನೊಂದಿಗೆ ದಿನ ಎಣಿಸುತ್ತಾ ಸಾತಜ್ಜಿ ಕಟ್ಟಿಯ ಮೇಲೆ ಕುಳಿತಿದ್ದಾಳೆ.


ಸುದ್ದಿ ಓದಿ