ಕೊಲೆ ಪ್ರಕರಣದ ವಿಚಾರಣಾ ಆರೋಪಿತ ಜೈಲಿನಿಂದಲೇ ಸಂಕೇಶ್ವರ ಪುರಸಭೆ ಸಾಮಾನ್ಯ ಸಭೆಗೆ ವಿಡಿಯೋ ಕಾಲ್‍ ಮೂಲಕ ಹಾಜರಾತಿ : ಚರ್ಚೆಗೆ ನ್ಯಾಯಾಲಯದ ಅನುಮತಿ

ಕೊಲೆ ಪ್ರಕರಣದ ವಿಚಾರಣಾ ಆರೋಪಿತ ಜೈಲಿನಿಂದಲೇ ಸಂಕೇಶ್ವರ ಪುರಸಭೆ ಸಾಮಾನ್ಯ ಸಭೆಗೆ ವಿಡಿಯೋ ಕಾಲ್‍ ಮೂಲಕ ಹಾಜರಾತಿ : ಚರ್ಚೆಗೆ ನ್ಯಾಯಾಲಯದ ಅನುಮತಿ

ಬೆಳಗಾವಿ, ಸಂಕೇಶ್ವರ : ಹಣಕಾಸಿನ ವ್ಯವಹಾರದಲ್ಲಿ ಒಂಟಿ ಮಹಿಳೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಆರೋಪದಡಿ ಬಂಧಿತನಾಗಿ ಜೈಲಿನಲ್ಲಿರುವ ಆರೋಪಿಯೋರ್ವ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ಮೂಲಕ ತನ್ನ ವಾರ್ಡಿನ ಸಮಸ್ಯೆಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪುರಸಭೆಯಲ್ಲಿ ಬುಧವಾರ ಸಂಜೆ ನಡೆದಿದೆ.

  ಸದ್ಯ ಬೆಳಗಾವಿ ಹಿಂಡಲಗಾ ಕಾರ್ಯಗೃಹದಲ್ಲಿರುವ ಸಂಕೇಶ್ವರ ಪುರಸಭೆಯ 14ನೇ ವಾರ್ಡಿನ ಬಿಜೆಪಿ ಸದಸ್ಯ, ವಿಚಾರಣಾಧೀನ ಕೈದಿ ಉಮೇಶ ಕಾಂಬಳೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆದು ಸಾಮಾನ್ಯ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾಗಿದ್ದಾನೆ. ಸಭೆಯ ಚಿತ್ರೀಕರಣ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

     ಸಂಕೇಶ್ವರ ಪುರಸಭೆ ಸದಸ್ಯ ಉಮೇಶ ಕಾಂಬಳೆ ಈತ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ 2022ರ ಜನೇವರಿ 16ರಂದು ಸಂಕೇಶ್ವರ ಪಟ್ಟಣದ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕಂಟ್ರಿ ಪಿಸ್ತೂಲ್ ಬಳಸಿ ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜ. 20ರಂದು ಬಂಧನಕ್ಕೊಳಗಾಗಿದ್ದಾನೆ. ಸದ್ಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಉಮೇಶ ಕಾಂಬಳೆ ಜೈಲಿನಿಂದ ವಿಡಿಯೋ ಕಾಲ್ ಮೂಲಕ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದಾನೆ.

    ಅಲ್ಲದೆ ತಾನು ಆಯ್ಕೆಯಾಗಿರುವ ವಾರ್ಡ್ ನಲ್ಲಿ ರಸ್ತೆ, ಗಟಾರು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯದೆ ಜನರು ತೊಂದರೆ ಅನುಭವಿಸುತ್ತಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಪುರಸಭೆ ಅಧಿಕಾರಿ ಚೌಗಲಾ ಹಾಗೂ ಪುರಸಭೆ ಅಧ್ಯರಲ್ಲಿ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

    ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂಡಲಗಾ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ, ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.


ಸುದ್ದಿ ಓದಿ