ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಬೆಳಗಾವಿ : ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಾನೇ ಆಸ್ತಿಯ ಮೂಲ ಮಾಲೀಕ ಎಂದು ಸುಳ್ಳು ಮಾಹಿತಿ ನೀಡಿ, ಫಿರ್ಯಾದಿದಾರರ ಆಸ್ತಿಯನ್ನು ವಂಚನೆಯ ಮೂಲಕ ಮಾರಾಟ ಮಾಡಿದ ಆರೋಪದಡಿ ಒಬ್ಬನನ್ನು ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಲಕ್ಷ್ಮಣ ಅರ್ಜುನ ದೇಸಾಯಿ (62), ಸಿದ್ದೇಶ್ವರ ಗಲ್ಲಿ, ಪೀರಣವಾಡಿ, ಬೆಳಗಾವಿ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರದಂತೆ, ರಫೀಕ್ ಇಮಾಮ್ ಶಹಾಪೂರಕರ (57), ಕಛೇರಿ ಗಲ್ಲಿ, ಉಚಗಾಂವ, ಬೆಳಗಾವಿ ಅವರು ತಮ್ಮ ಆಸ್ತಿಯನ್ನು ನಕಲಿ ದಾಖಲೆಗಳ ಮೂಲಕ ವಂಚಿಸಿ ಮಾರಾಟ ಮಾಡಲಾಗಿದೆ ಎಂದು 2025ರ ಜನವರಿ 10ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಅಪರಾಧ ಸಂಖ್ಯೆ 06/2025ರಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ವಂಚನೆ, ವೇಷಧಾರಣೆ, ನಕಲಿ ದಾಖಲೆ ಸೃಷ್ಟಿ ಹಾಗೂ ಬಳಕೆಗೆ ಸಂಬಂಧಿಸಿದ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಆರೋಪಿಯು ಫಿರ್ಯಾದಿದಾರರ ಚಿಕ್ಕಪ್ಪನ ಹೆಸರಿನಲ್ಲಿ ತಾನೇ ಮೂಲ ಮಾಲೀಕನಂತೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಾಜರಾಗಿ, ಮಾಲೀಕರ ಸ್ಥಾನದಲ್ಲಿ ಕುಳಿತು ವೆಬ್ ಕ್ಯಾಮೆರಾದಲ್ಲಿ ಛಾಯಾಚಿತ್ರ ತೆಗೆಸಿಕೊಂಡು, ಹೆಬ್ಬೆರಳಿನ ಗುರುತು ನೀಡಿ ಆಸ್ತಿಯನ್ನು ಇತರರ ಹೆಸರಿಗೆ ನೋಂದಣಿ ಮಾಡಿಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಫಿರ್ಯಾದಿದಾರ ಹಾಗೂ ಅವರ ಕುಟುಂಬದವರಿಗೆ ವಂಚನೆ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಆರೋಪಿಯನ್ನು 2026ರ ಜುಲೈ 28ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ, ಪಿಎಸ್‌ಐ ಹೆಚ್.ಎಲ್. ಕೆರೂರ ಹಾಗೂ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದು, ಅವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.