ನಿಷೇಧಿತ ಔಷಧಿಗಳ ಮಾರಾಟ, ಶಿಫಾರಸು ಕಾನೂನು ಬಾಹಿರ: ಡಾ.ವಿರೇಶ್
ಮಹಾಲಿಂಗಪುರ 27: ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಔಷಧಿ ವ್ಯಾಪಾರಿಗಳು ಕಾನೂನು ರೀತ್ಯವಾಗಿ ನಿಷೇಧಿತ ಓಷಧಿಗಳ ಮಾರಾಟವಾಗಲಿ ಅಥವಾ ವೈದ್ಯರು ಶಿಫಾರಸು ಮಾಡುವುದಾಗಲಿ ಮಾಡಬಾರದು, ಹೀಗೆ ಮಾಡುವುದರಿಂದ ನಾಗರಿಕ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಅಲ್ಲದೆ ತಾವುಗಳು ಕಾನೂನಿನ ದೃಷ್ಟಿಯಲ್ಲಿ ಶಿಕ್ಷಾರ್ಹ ಅಪರಾಧಿಗಳಾಗುತ್ತಿರಿ ಎಂದು ಬಾಗಲಕೋಟ ವೃತ್ತ ಸಹಾಯಕ ಓಷಧ ನಿಯಂತ್ರಕ ಡಾ.ವಿರೇಶ್ ಬಾಬು ಎಸ್ ವಿ ಹೇಳಿದರು.
ಬಾಗಲಕೋಟ ವೃತ್ತ ಓಷಧ ನಿಯಂತ್ರಣ ಇಲಾಖೆ ಹಾಗೂ ಮಹಾಲಿಂಗಪುರ ಓಷಧ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಓಷಧಿಗಳ ದುರುಪಯೋಗ ಹಾಗೂ ಅಕ್ರಮ/ಕಳ್ಳಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಓಷಧಿ ವ್ಯಾಪಾರಿಗಳಿಗೆ ' ಕಲಿಕಾ ಕಾರ್ಯಕ್ರಮ' ವು ಎಪಿಎಂಸಿ ದಲಾಲ ವರ್ತಕರ ಸಂಘದ ಸಭಾಭವನದಲ್ಲಿ ಬುಧವಾರ ಸಂಜೆ ಜರುಗಿತು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕೆಲವರು ನಿರಂತರ ಮಾರಕ ಓಷಧಿಗಳನ್ನು ಬಳಸಿ ತಾತ್ಕಾಲಿಕ ನೆಮ್ಮದಿ ಪಡೆಯುತ್ತಿರುತ್ತಾರೆ.ಅಂತಹವರಿಗೆ ಬಳಕೆಯಿಂದಾಗುವ ಪರ್ಯಾಯ ದುಷ್ಪರಿಣಾಮಗಳ ಬಗ್ಗೆ ವೈದ್ಯರು ಮತ್ತು ಓಷಧ ವ್ಯಾಪಾರಸ್ಥರು ಅರಿವು ಮೂಡಿಸಿ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಕೇವಲ ಹಣ ಸಂಪಾದನೆ ನಮ್ಮ ಮಾನದಂಡವಾಗಬಾರದು. ಈ ರೀತಿಯ ಪಾರದರ್ಶಕ ವರ್ತನೆಗಳು ಜನತೆಯಲ್ಲಿ ನಮ್ಮ ಬಗ್ಗೆ ವಿಶ್ವಾಸ ಹೆಚ್ಚಿಸುತ್ತದೆ. ನಮ್ಮ ಕ್ಲಿನಿಕ್ ಅಥವಾ ಓಷದಿ ಅಂಗಡಿಯ ವ್ಯಾಪಾರ ವಹಿವಾಟು ಸಹ ದ್ವೀಗುಣಗೊಂಡು ಆದಾಯ ಹೆಚ್ಚಳವಾಗುತ್ತದೆ ಎಂದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಮುಖ್ಯಸ್ಥ ಡಾ. ಸಿ ಎಂ ವಜ್ಜರ್ಮಟ್ಟಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಸ್ಥಳೀಯ ಓಷಧ ವ್ಯಾಪಾರಸ್ಥರ ಗ್ರಾಹಕರೊಂದಿಗಿನ ಪಾರದರ್ಶಕ ನಡೆಯನ್ನು ಶ್ಲ್ಯಾಘಿಸಿದರು. ಶ್ರೀಪಾದ ಗುಂಡಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ವೃತ್ತ ಓಷಧ ಪರೀವೀಕ್ಷಕ ಮಂಜುನಾಥ ಎಸ್ ಎಸ್, ರಾಜು ನಾಯಕ, ರವಿ ಕೊಕಟನೂರ, ರಾಜಶೇಖರ ಹಿರೇಮಠ, ಬಸವರಾಜ ಬಿರಾದಾರ ಇದ್ದರು. ಕಾರ್ಯಕ್ರಮ ಸಂಯೋಜಕರು ಸಂಘದ ಸದಸ್ಯರಾದ ಅನೀಲ ಉಳ್ಳಾಗಡ್ಡಿ, ರಾಜೇಶ್ ನಂದೆಪ್ಪನ್ನವರ, ರವಿ ಗೊಬ್ಬಾನಿ, ಬಸವರಾಜ ಕೊಣ್ಣೂರಮಠ, ಬಸವರಾಜ ಶಿರೋಳ, ಸಿದ್ದು ಕೊಣ್ಣೂರ, ಕಿರಣ ಗುಂಡಾ, ಪ್ರಕಾಶ ಹೊಸೂರು, ಪ್ರಭು ಬ್ಯಾಳಿ, ಗುರುರಾಜ ಅಂಬಿ, ಮೋನಪ್ಪ ಜಮಖಂಡಿ ಉಪಸ್ಥಿತರಿದ್ದು, ಸ್ಥಳೀಯ ಓಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಾಂತೇಶ ತಿರಕನ್ನವರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಗೌರವಾಧ್ಯಕ್ಷ ಶ್ರೀಶೈಲ ಹಿಪ್ಪರಗಿ ವಂದಿಸಿದರು.
ಮುಖ್ಯಾಂಶಗಳು:
* ಇಂದಿನ ಯುವಕರು ಗಾಂಜಾ, ಅಫೀಮು, ಕೋಕೆನ್, ಬ್ರೌನ್ ಶುಗರ, ವಿವಿಧ ತಂಬಾಕು ಎಂಬ ಮಾದಕವಸ್ತುಗಳು ಮತ್ತು ಉತ್ತೇಜನಕಾರಿ ಓಷಧಿಗಳಿಂದ ತಮ್ಮ ಆರೋಗ್ಯ ಹಾಳು ಮಾಡಿಕ್ಕೊಂಡು ಕಲಿಕಾ ಕೌಶಲ್ಯವನ್ನು ಕಳೆದುಕ್ಕೊಂಡಿದ್ದಾರೆ ಪೋಷಕರಿಗೆ ಹೊರೆಯಾಗುತ್ತಿದ್ದಾರೆ.
*ಇದನ್ನು ತೊಡೆದು ಹಾಕಲು ಪೋಷಕರು ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಟ್ಟು ಆಗಾಗ ಬುಧ್ಧಿವಾದ ಹೇಳುತ್ತ ಅವರನ್ನು ದುಷ್ಟ ವ್ಯಕ್ತಿಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.
* ವೈದ್ಯರಿಂದ ಶಿಫಾರಸು ಪಡೆದು ಓಷಧಿ ಖರೀದಿ ಮಾಡುವವರು ಪರವಾಗಿಲ್ಲ. ಚಟಕ್ಕಾಗಿ ಡ್ರಗ್ ಅಡಿಕ್ಟ್ ಆದ ವ್ಯಕ್ತಿಗಳ ಮೇಲೆ ವ್ಯಾಪಾರಿಗಳು ಸಹ ವಿಶೇಷ ನಿಗಾವಿರಿಸಬೇಕು.