ಮಹಲಿಂಗಪುರ

ನಾಡ ರಕ್ಷಣೆಯಲ್ಲಿ ಯೋಧರ ತ್ಯಾಗ ಅವಿಸ್ಮರಣೀಯ : ಎಸ್‌.ಐ. ಕುಂದಗೋಳ

ನಾಡ ರಕ್ಷಣೆಯಲ್ಲಿ ಯೋಧರ ತ್ಯಾಗ ಅವಿಸ್ಮರಣೀಯ : ಎಸ್‌.ಐ. ಕುಂದಗೋಳ

ಮಹಾಲಿಂಗಪುರ 26: ನಾಡಿನಲ್ಲಿ ನಾವು ಸುಖವಾಗಿ ನಿದ್ರೆ ಮಾಡಲು, ನೆಮ್ಮದಿಯಾಗಿ ಬಾಳ್ವೆ ಮಾಡಲು ಸಾಧ್ಯವಾಗುವುದು  ಗಡಿಯಲ್ಲಿ ಯೋಧರು ಮಾಡುವ ತ್ಯಾಗದಿಂದ ಎಂದು ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಪ್ರಾಚಾರ್ಯ ಎಸ್‌.ಐ.ಕುಂದಗೋಳ ಹೇಳಿದರು.  

ಕಾಲೇಜಿನಲ್ಲಿ ಶುಕ್ರವಾರ ಜು.26ರಂದು ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.  ನಾಗರಿಕರಾದ ನಾವು ರೈತ ಸುರಿಸುವ ಬೆವರು ಮತ್ತು ಯೋಧ ಹರಿಸುವ ರಕ್ತಕ್ಕೆ ಋಣಿಯಾಗಿರಬೇಕು. ಜೈ ಜವಾನ್ ! ಜೈ ಕಿಸಾನ್ ! ಎಂಬ ಮಾತಿಗೆ ಬದ್ದರಾಗಿರಬೇಕು. ಕಾರ್ಗಿಲ್ ವಿಜಯದಲ್ಲಿ ಭಾಗಿಯಾದ ಯೋಧರ ಜೊತೆ ನಾವಿರುವುದೇ ಸೌಭಾಗ್ಯದ ಸಂಗತಿ ಎಂದರು. 

ನಿವೃತ್ತ ಯೋಧ, ಕಾರ್ಗಿಲ್ ಯುದ್ಧದ ಗಾಯಾಳು ಶಿವಾನಂದ ಪರ​‍್ಪನವರ ಮಾತನಾಡಿ, ಕಾರ್ಗಿಲ್ ಕದನದ ಕರಾಳ ದಿನಗಳನ್ನು ಮತ್ತು ವಿಜಯದ ವೀರೋತ್ಸಾಹದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಹಂಚಿಕೊಂಡರು. ರಾಷ್ಟ್ರಧ್ವಜ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಯೋಧನ ಉಸಿರಿನಿಂದ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.  

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಶಿವಾನಂದ ಪರ​‍್ಪನವರ, ಹನಮಂತ ಕುರಿ, ಮಹಾಂತೇಶ ಮಿರ್ಜಿ, ಸಿದ್ರಾಮ ಹೊಸಮನಿ, ಐ.ಜಿ.ಚಿಂದಿ, ಬಿ.ಎಸ್‌.ಉದ್ದಪ್ಪಗೋಳ, ಮಹಾಂತೇಶ ಅಂಗಡಿ, ಮುರುಗೇಂದ್ರ ಗಾಡವಿ, ಮಹಾದೇವ ತೇಲಿ, ರವಿ ಕ್ಯಾತನ್ನವರ ಸೇರಿದಂತೆ ಹತ್ತಾರು ಯೋಧರನ್ನು ಸಾಮೂಹಿಕವಾಗಿ ಸನ್ಮಾನಿಸಿ ಸಲ್ಯೂಟ್ ಹೇಳಲಾಯಿತು.  

ನಂತರ ವಿದ್ಯಾರ್ಥಿಗಳೆಲ್ಲರೂ ಮಾಜಿ ಸೈನಿಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಹೆಮ್ಮೆ ಪಟ್ಟರು. ಭೋಲೋ ಭಾರತ್ ಮಾತಾ ಕಿ ಜೈ ಎಂಬ ಜಯಘೋಷ ಮೊಳಗಿತು. ವಿದ್ಯಾರ್ಥಿನಿಯರು ಭಾವಚಿತ್ರ ತೆಗೆಸಿಕೊಳ್ಳುವಾಗ ನೀವೂ ಆರ್ಮಿಗೆ ಸೇರಬಹುದು ಎಂದು ಯೋಧರೊಬ್ಬರು ಸಲಹೆ ನೀಡಿದರು. ಅಷ್ಟರಲ್ಲೇ ಶಿವಲಿಂಗ ಸಿದ್ನಾಳ ಮುಂದುವರೆದು ಹುಡುಗಿಯರು ಸೈನ್ಯ ಸೇರಲು ಸಾಧ್ಯವಾಗದಿದ್ದರೂ ಕಡೆಯಪಕ್ಷ ಸೈನಿಕನನ್ನು ಮದುವೆಯಾಗುವ ಓದಾರ್ಯವನ್ನಾದರೂ ತೋರಬೇಕು ಎಂದು ಮನವಿ ಮಾಡಿದರು.  

ಸಾಂಸ್ಕೃತಿ ವಿಭಾಗದ ಮುಖ್ಯಸ್ಥೆ ಮಹಾದೇವಿ ಅಂಬಿ, ಗುರುರಾಜ ಅಥಣಿ, ಉಮೇಶ ಹಾದಿಮನಿ, ಸುಭಾಸ್ ಮೂಶಿ, ವಿಶಾಲ್ ಮೆಟಗುಡ, ಅಮೀತ ಜಾಧವ, ಮಂಜುನಾಥ ಅರಕೇರಿ, ವಂದನಾ ಪಸಾರ, ಸವಿತಾ ಗೊಂದಿ, ಚೈತ್ರಾ ಹುದ್ದಾರ, ಅಂಜನಾ ಮಾಲಜ, ಸವಿತಾ ಬೀಳಗಿ, ನಿರ್ಮಲಾ ಫಕೀರಪುರ, ಲಕ್ಷ್ಮೀ ಅಂಗಡಿ, ಸಾಕ್ಷಿ ಕೋರಿಶೆಟ್ಟಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ