ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆಗಳು: ಜನರಲ್ಲಿ ಆಕ್ರೋಶ
ಇಂಡಿ18: ಪಟ್ಟಣದ 19 ನೇ ವಾರ್ಡಿನ ರಸ್ತೆಗಳು ಕಳೆದ ಎರಡು ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆಗಳಾಗಿವೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಚುನಾವಣೆಯ ಸಮಯದಲ್ಲಿ ಹೇಳುವ ಪುರಸಭೆ ಸದಸ್ಯರು ಮತ್ತು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುವ ಪುರಸಭೆಯ ಅಧಿಕಾರಿಗಳು ಒಮ್ಮೆ ಈ ರಸ್ತೆಯ ಕಡೆಗೆ ಗಮನ ಕೊಡಿ ಎಂದು ನಿವಾಸಿಗಳು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಸರಿಯಾದ ರಸ್ತೆಗಳಿಲ್ಲದೆ ವಾರ್ಡನ ಬೀದಿಗಳಲ್ಲಿಯ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ರಸ್ತೆಯಲ್ಲ ಗಲೀಜಾಗಿ ಕೊಳಚೆಯುಕ್ತವಾಗುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಿದೆ. ಅದರಲ್ಲೂ ಮಕ್ಕಳು, ವೃದ್ಧರೂ, ಗರ್ಭಿಣಿ ಮಹಿಳೆಯರು ಆರೋಗ್ಯದಲ್ಲಿ ಸದಾ ಏರು ಪೇರು ಕಾಣುತ್ತದೆ. ಸಂಜೆ ಮಕ್ಕಳಿಗೆ ಟ್ಯೂಷನ್‍ಗೆ ಕಳಿಸಲು ಕೂಡ ಹೆದರಿಕೆಯಾಗುತ್ತದೆ. ಪುರಸಭೆಯ ಯೋಜನೆ ಅಡಿಯಲ್ಲಿ ಆಗುತ್ತಿರುವ ಎಲ್ಲಾ ಉಪಯೋಗಗಳು ಮತ್ತು ಪ್ರಯೋಜನಗಳು 19 ನೇ ವಾರ್ಡಿಗೆ ಮಾತ್ರ ಮರೀಚಿಕೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಯಾಗದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ವಾರ್ಡಿನ ಮತ ನೀಡುವ ಮತದಾರರಿಂದ ಕೂಗು ಈಗಿನಿಂದಲೇ ಕೇಳಿಬರುತ್ತಿದೆ.
ಇಂಡಿ ಪಟ್ಟಣದಲ್ಲಿಯೇ ದೊಡ್ಡ ನಗರವೇ 19ನೇ ವಾರ್ಡ ಆಗಿದ್ದು, ಈ ವಾರ್ಡಿನಲ್ಲಿ ರಸ್ತೆಗಳು, ಚರಂಡಿಗಳು, ಡ್ರೈನೇಜಗಳು, ವಿದ್ಯುತ್ತ ವ್ಯವಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತಕಡೆ ಸುಳಿಯುವುದಿರಲಿ ಸಮಸ್ಯೆ ಆಲಿಸಲು ವಾರ್ಡಿಗೆ ಬಾರದೆ ಇದ್ದುದ್ದರಿಂದ ವಾರ್ಡ ಅನಾಥವಾಗಿದೆ.
ಸುಭಾಸ ಹಿಟ್ನಳ್ಳಿ 19ನೇ ವಾರ್ಡ ನಾಗರಿಕ.
ನಾನು ಆಯ್ಕೆಯಾದ ದಿನದಿಂದಲೂ ಅಲ್ಲಿ ಅಲ್ಲಿ ಕೆಲಸ ಮಾಡಿದ್ದೇನೆ. ಆದರೆ 19ನೇ ವಾರ್ಡ ದೊಡ್ಡದಾದ್ದರಿಂದ ಸ್ವಲ್ಪ ವಿಳಂಬವಾಗಿದೆ. ಈಗಾಗಲೆ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರನ್ನು ಹಾಗೂ ಪುರಸಭೆ ಮುಖ್ಯಾಧಿಕಾರಿಗಳನ್ನು 19ನೇ ವಾರ್ಡಿನ ಕಾಮಗಾರಿಗಾಗಿ ಕೇಳಿಕೊಂಡಿದ್ದೇನೆ. ಇನ್ನೂಳಿದ ಕೆಲಸ ಒಂದು ತಿಂಗಳಲ್ಲಿ ಮಾಡಿ ಮುಗಿಸುತ್ತೇನೆ.
ಉಮೇಶ ದೇಗಿನಾಳ 19ನೇ ವಾರ್ಡ ಸದಸ್ಯ.