ಜೀವ ಉಳಿಸಲು ಸರಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸ್ಪಂದಿಸಿ
ಶಾಸಕ ಸಿದ್ದು ಸವದಿ ಕರೆ: ತೆರೆದ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ
ಮಹಾಲಿಂಗಪುರ 28: ನಮ್ಮ ನಿಮ್ಮ ಜೀವ ಉಳಿಸಲು ಸರಕಾರ ಕೈಗೊಳ್ಳುತ್ತಿರುವ ಬಿಗಿ ಕ್ರಮಗಳಿಗೆ ಸರ್ವರೂ ಸ್ಪಂದಿಸಿ ದೇಶವನ್ನು ಗಂಡಾಂತರದಿಂದ ಆದಷ್ಟು ಬೇಗ ಹೊರತರಬೇಕಾಗಿದೆ ಎಂದು ಕೆಎಚ್ ಡಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಂಗಳವಾರ ಸಂಜೆ ತೆರೆದ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ತಿಳುವಳಿಕೆ ನೀಡುತ್ತಿದ್ದ ಅವರು ಪಟ್ಟಣದ ರೋಡಗಿಡದ ಮಹಾಲಿಂಗೇಶ್ವರ ದೇವಸ್ಥಾನದಿಂದ ರಾಣಿ ಚೆನ್ನಮ್ಮ ವೃತ್ತ, ಬುದ್ನಿ ಪಿಡಿ ಯ ಕನಕದಾಸ ವೃತ್ತ, ಬನಶಂಕರಿ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನ, ನಡುಚೌಕಿ, ಜೋಡುರಸ್ತೆ, ಬಸವೇಶ್ವರ ವೃತ್ತ, ಬಸವನಗರ, ಮಹಾಂತೇಶ ನಗರ, ವಿದ್ಯಾನಗರ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಾ ಮಾತನಾಡಿದ ಅವರು, ಮೊದಲ ಅಲೆಯ ಸಂದರ್ಭದಲ್ಲಿ ಜಗತ್ತಿನ ದೇಶಗಳಿಗೆ ಕೊರೋನಾ ನಿರ್ಮೂಲನೆಗೆ ಸಹಾಯ ಹಸ್ತ ನೀಡಿ ವಿಶ್ವಗುರುವಾಗಿದ್ದ ನಮ್ಮ ಭಾರತ ಇಂದು ಸಂಕಷ್ಟದಲ್ಲಿದೆ. ಅಂದಿನ ಕಾರ್ಯಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳು ಸಂಕಷ್ಟದಲ್ಲಿರುವ ನಮಗೆ ಸಹಾಯ ಮಾಡುತ್ತಿವೆ. ಈ ಸಂಕಷ್ಟ ಶಾಶ್ವತವಲ್ಲ, ಆದರೆ ಇದರಿಂದ ಬೇಗನೆ ಮುಕ್ತರಾಗಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ನಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತ್ತು ಮುಂದಿನ 14 ದಿನಗಳು ಮನೆಯಿಂದ ಹೊರಬರದೇ ಸಹಕರಿಸಿ ಹಾಗೂ ಪ್ರತಿದಿನ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಿ ಉಳಿದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬೇಡಿ ಎಂದರು.
ತಹಶೀಲ್ದಾರ್ ಸಂಜಯ ಬಿ.ಇಂಗಳೆ , ಸರ್ಕಲ್ ಪೋಲೀಸ್ ಇನ್ಸ್ ಪೆಕ್ಟರ್ ಕರುಣೇಶಗೌಡ, ಪುರಸಭಾ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ, ಪಿ ಎಸ್ ಐ ಆನಂದ ಅದಗೊಂಡ, ಬಸವರಾಜ ತಾಳಿಕೋಟೆ, ಕಂದಾಯ ಅಧಿಕಾರಿ ಲಮಾಣಿ, ಪುರಸಭಾ ಸದಸ್ಯರಾದ ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಶಿವಾನಂದ ಅಂಗಡಿ, ಶಿವಾನಂದ ಹುಣಶ್ಯಾಳ, ಬಸವರಾಜ ಚಮಕೇರಿ, ಮಹೇಶ ಚಿಂಚಲಿ, ವಿಕ್ರಮ ಕುಳ್ಳೂರ ಇತರರು ಇದ್ದರು.