ಎಲ್ಲ ಸಮುದಾಯಗಳ ಜಯಂತಿಗಳಿಗೆ ಅನುಮತಿ ನೀಡುವಂತೆ ಠಾಣಾಧಿಕಾರಿಗಳಿಗೆ ಮನವಿ
ಮಹಾಲಿಂಗಪುರ 14: ಕರ್ನಾಟಕ ರಾಜ್ಯದಲ್ಲಿ ಕೊರೋನಾ ಗಣನೀಯವಾಗಿ ಕಡಿಮೆಯಾಗಿದ್ದು, ವಿವಿಧ ಸಮುದಾಯಗಳ ಧಾರ್ಮಿಕ ಕಾರ್ಯಗಳಿಗೆ ಹಾಗೂ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಹೊರಾಂಗಣದಲ್ಲಿ ಆಚರಿಸಲು ಅನುಮತಿ ಮತ್ತು ಭದ್ರತೆ ನೀಡಬೇಕೆಂದು ವಿವಿಧ ಸಂಘಟನೆಗಳ ಪ್ರಮುಖರು ಸ್ಥಳೀಯ ಠಾಣಾಧಿಕಾರಿಗಳಿಗೆ ಶನಿವಾರ ಸಂಜೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಠಾಣಾಧಿಕಾರಿಗಳ ಕುರಿತು ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ಚುನಾವಣೆಗಳು, ಗಣ್ಯರ ಸಾವು ನೋವುಗಳಲ್ಲಿ, ಅವರ ಮಕ್ಕಳ ಮದುವೆ,ಮುಂಜುವೆಗಳಲ್ಲಿ ಲಕ್ಷೋಪ ಲಕ್ಷ ಜನ ಸೇರುತ್ತಾರೆ. ಅಲ್ಲಿ ಕರೊನಾ ನಿಯಮಗಳು ಗಣನೆಗೆ ಬರುವುದಿಲ್ಲ. ಇಲ್ಲಿ ಮಹಾತ್ಮರ ಜಯಂತಿಗಳು ಹಾಗೂ ಜಾತ್ರೆ, ಧಾರ್ಮಿಕ ಕಾರ್ಯಗಳಲ್ಲಿ ಮಾತ್ರ ಕರೊನಾ ಭಯ ಹೆಚ್ಚುತ್ತದೆ ಇದು ಹೇಗೆ ಸಾಧ್ಯ? ಎಂದು ಠಾಣಾಧಿಕಾರಿಗಳನ್ನು ಪ್ರಶ್ನಿಸಿ, ಬರುವ ಜಯಂತಿಗಳನ್ನು ಅದ್ದೂರಿಯಾಗಿ ಹೊರಾಂಗಣದಲ್ಲಿ ಆಚರಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಇದರಿಂದ ಎಲ್ಲ ಬೃಹತ್, ಮಧ್ಯಮ, ಸಣ್ಣ,ಪುಟ್ಟ ವ್ಯಾಪಾರಸ್ಥರು, ಜನಸಾಮಾನ್ಯರ ಹಾಗೂ ರೈತರ ಆರ್ಥಿಕ ಪರಿಸ್ಥಿತಿಗಳು ಸುಧಾರಣೆಗಳುತ್ತವೆ ಆದ್ದರಿಂದ ಎಲ್ಲ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಎಂದು ವಿನಂತಿ ಅರ್ಜಿ ನೀಡಿದರು.
ಅದಕ್ಕುತ್ತರವಾಗಿ ಠಾಣಾಧಿಕಾರಿ ವಿಜಯ ಕಾಂಬ್ಳೆ ಮಾತನಾಡಿ, ಸರ್ಕಾರ ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದಲೂ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ ನಮ್ಮ ಯಾವುದೇ ತರಹದ ಲಾಭಿ ಇರುವುದಿಲ್ಲವೆಂದು ಸ್ಪಷ್ಟನೆ ನೀಡಿ, ಈಗಾಗಲೇ ಸರ್ಕಾರ ಹಂತಹಂತವಾಗಿ ಎಲ್ಲ ಕಡೆಗೂ ಧಾರ್ಮಿಕ, ಮದುವೆ ಇನ್ನಿತರ ಕಾರ್ಯಗಳಿಗೆ ಅವಕಾಶ ನೀಡುತ್ತಿದೆ. ಇನ್ನೂ ಕೊರೋನಾ ಮಹಾಮಾರಿ ಸಂಪೂರ್ಣವಾಗಿ ತೊಲಗಿಲ್ಲ ಆದ್ದರಿಂದ ನಾವೆಲ್ಲರೂ ಎಚ್ಚರಿಕೆ ವಹಿಸಿ, ಕೊರೋನಾ ನಿಯಮಗಳನ್ನು ಪಾಲಿಸುತ್ತಾ ದೈನಂದಿನ ಬದುಕು ಸಾಗಿಸಬೇಕಾಗಿದೆ, ಎಲ್ಲರೂ ಸಹಕರಿಸಬೇಕು ಎಂದರು.
ಪ್ರಮುಖರಾದ ಜಾವೇದ್ ಭಾಗವಾನ್, ಪರಶುರಾಮ್ ಮೇತ್ರಿ, ವಿಠ್ಠಲ ಸಂಶಿ, ಮಹಾಲಿಂಗಪ್ಪ ಜಕ್ಕಣ್ಣವರ, ಪರ್ಪ ದುರದುಂಡಿ, ರಮೇಶ ಭಾವಿಕಟ್ಟಿ, ಸತ್ಯಪ್ಪ ಹುದ್ದಾರ, ಪಾರೂಖ ಪಕಾಲಿ, ವಿಜಯ ಲಾತೂರ, ಪರಶುರಾಮ ಲಾತೂರ್, ಕರೆಪ್ಪ ಮೇಟಿ, ಅವಟಿ, ಗಿರೆಪ್ಪ ಬಡಗಾವಿ, ಸಿದ್ದಪ್ಪ ಕಿಶೋರಿ, ಮಹಾಂತೇಶ ಹೆಗ್ಗಾಣಿ, ನಿಂಗಪ್ಪ ಅವಟಗಿ, ರಾಮಪ್ಪ ಹುಣಸಿಕಟ್ಟಿ, ಸಿರಾಜ್ ಪಾಂಡು, ಮುಸ್ತಾಕ್ ಚಿನಗುಂಡಿ ಇನ್ನೂ ಮುಂತಾದವರಿದ್ದರು.