ಸಂಗೀತದಿಂದ ಮನಸಿಗೆ ನೆಮ್ಮದಿ : ಅಮರೇಶ ಹುಬ್ಬಳ್ಳಿ
ಯಲಬುರ್ಗಾ 11: ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ ಆಲಿಕೆಯಿಂದ ಮನುಷ್ಯನ ಮಾನಸಿಕ ಒತ್ತಡ ನಿಗ್ರಹಗೊಂಡು ಮನಸ್ಸು ಪ್ರಸನ್ನಗೊಳ್ಳುತ್ತದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.
ಪಟ್ಟಣದ ಡಾ ಬಾಬು ಜಗ ಜೀವನರಾಮ್ ನಗರದ ಅಂಬೇಡ್ಕರ್ ಭವನದಲ್ಲಿ ಜನಧ್ವನಿ ಗ್ರಾಮೀಣ ಅಭಿವೃದ್ಧಿ ಕಲಾ ಸಾಂಸ್ಕೃತಿಕ ಸಂಸ್ಥೆ ಹೊಸಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೀತ ಯೋಗವಿದ್ದಂತೆ. ಅದನ್ನು ನಿರಂತರ ಪ್ರಯತ್ನದಿಂದ ಸಿದ್ಧಿಸಿಕೊಳ್ಳಬೇಕು. ರೋಗಗಳನ್ನು ನಿಯಂತ್ರಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ತಜ್ಞರ ಅಭಿಪ್ರಾಯವಿದೆ. ಆದ್ದರಿಂದ ನಾವಿಂದು ಅವಸರ ಮತ್ತು ಒತ್ತಡದ ಬದುಕನ್ನು ಸಾಗಿಸುತ್ತಿದ್ದೇವೆ. ದಣಿದ ದೇಹಕ್ಕೆ ವಿಶ್ರಾಂತಿ ಬೇಕು. ಸಂಗೀತ ಆಲಿಕೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಭಾವಿಮನಿ ಸಂಗೀತದ ಕುರಿತು ಮಾತನಾಡಿದರು. ಬಿಜೆಪಿ ಮುಖಂಡ ದೊಡ್ಡಯ್ಯ ಗುರುವಿನ್, ಕಾಂಗ್ರೆಸ್ ಪಕ್ಷದ ಮುಖಂಡ ಶಿವಾನಂದ ಬಣಕಾರ್, ಸಂಸ್ಥೆಯ ಅಧ್ಯಕ್ಷ ದೇವಪ್ಪ ಟೆಂಗುಂಟಿ, ಕಾರ್ಯದರ್ಶಿ ನೇತ್ರಾವತಿ ಕುಂಬಾರ್, ಪುಟ್ಟರಾಜ, ಇದ್ದರು.