'ಕಲುಷಿತ' ರಸಗೊಬ್ಬರ ಮತ್ತೆ ಪರೀಕ್ಷಿಸಿ; ಚೀನಾ ಮನವಿ
ಕೊಲಂಬೊ, ಅಕ್ಟೋಬರ್ 26 ಶ್ರೀಲಂಕಾದ ಚೀನೀ ರಾಯಭಾರಿ ಮತ್ತು ಚೀನಾದ ಸಂಸ್ಥೆ ಕ್ವಿಂಗ್ಡಾವೊ ಸೀವಿನ್ ಬಯೋಟೆಕ್ ಗ್ರೂಪ್ ಕಂಪನಿ ಲಿಮಿಟೆಡ್ ಪ್ರತಿನಿಧಿಗಳು ಮೂರನೇ ಸಂಸ್ಥೆ ಮೂಲಕ ಚೀನಾದ ತಿರಸ್ಕೃತ ಸಾವಯವ ರಸಗೊಬ್ಬರವನ್ನು ಮತ್ತೆ ಪರೀಕ್ಷೆ ನಡೆಸುವಂತೆ ಶ್ರೀಲಂಕಾ ಕೃಷಿ ಸಚಿವಾಲಯವನ್ನು ಕೋರಿದ್ದಾರೆ.
ಇದನ್ನು ಕೃಷಿ ಮಹಾನಿರ್ದೇಶಕರು ಮಾಧ್ಯಮ ಸಂಸ್ಥೆಗೆ ದೃಢಪಡಿಸಿದರು. ಶ್ರೀಲಂಕಾಕ್ಕೆ ಹೊರಟಿದ್ದ 20,000 ಮೆಟ್ರಿಕ್ ಟನ್ ಕಲುಷಿತ ಚೀನೀ ರಸಗೊಬ್ಬರವನ್ನು ಸಾಗಿಸುತ್ತಿದ್ದ 'ಹಿಪ್ಪೋ ಸ್ಪಿರಿಟ್' ಹಡಗು ಕೊಲಂಬೊ ಬಂದರಿಗೆ ಪ್ರವೇಶವನ್ನು ನಿಷೇಧಿಸಲು ಕೊಲಂಬೊ ಪೋರ್ಟ್ ಹಾರ್ಬರ್ ಮಾಸ್ಟರ್ ಕಠಿಣ ನಿರ್ದೇಶನಗಳನ್ನು ನೀಡಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್ 29 ರಂದು, ಶ್ರೀಲಂಕಾದ ಕೃಷಿ ಸಚಿವ ಮಹಿಂದಾನಂದ ಅಲುತ್ಗಮಗೆ ಅವರು ಚೀನಾ ಗೊಬ್ಬರದ ಮಾದರಿಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾದ ಇರುವಿಕೆಯನ್ನು ಲ್ಯಾಬ್ ಪರೀಕ್ಷೆಗಳು ಬಹಿರಂಗಪಡಿಸಿದ ನಂತರ ಚೀನಾದಿಂದ ಸಾವಯವ ರಸಗೊಬ್ಬರ ಆಮದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದರು.
ರಸಗೊಬ್ಬರವು ಕ್ವಿಂಗ್ಡಾವೊ ಸೀವಿನ್ ಬಯೋಟೆಕ್ ಗ್ರೂಪ್ ಕಂಪನಿ, ಲಿಮಿಟೆಡ್ ನಿಂದ ಬಂದಿದೆ. 'ಎರ್ವಿನಿಯಾ' ಎಂದು ಗುರುತಿಸಲಾದ ಸೂಕ್ಷ್ಮಜೀವಿಯನ್ನು ಶ್ರೀಲಂಕಾಕ್ಕೆ ಇಳಿಸಿದ ಗೊಬ್ಬರದ ಮಾದರಿಗಳಲ್ಲಿ ಪತ್ತೆ ಮಾಡಲಾಗಿದೆ ಮತ್ತು ಪರೀಕ್ಷಿಸಲಾಗಿದೆ ಎಂದು ಶ್ರೀಲಂಕಾದ ಕೃಷಿ ಸಚಿವರು ದೃಢಪಡಿಸಿದರು. ಚೀನಾದ ಸಾವಯವ ರಸಗೊಬ್ಬರದ ಹೊಸ ಮಾದರಿಯಲ್ಲಿ (ಎರಡನೇ ಬ್ಯಾಚ್) ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕೃಷಿ ಮಹಾನಿರ್ದೇಶಕ ಡಾ. ಅಜಂತಾ ಡಿ ಸಿಲ್ವಾ ಸೆಪ್ಟೆಂಬರ್ 28ರಂದು ದೃಢಪಡಿಸಿದರು.
ಆದಾಗ್ಯೂ, ಅಕ್ಟೋಬರ್ ೧೦ ರಂದು, ಚೀನಾದ ರಾಯಭಾರ ಕಚೇರಿ ಎರ್ವಿನಿಯಾ ಬ್ಯಾಕ್ಟೀರಿಯಾವು ಕ್ವಿಂಗ್ಡಾವೊ ಸೀವಿನ್ ಬಯೋಟೆಕ್ ಗ್ರೂಪ್ ಕಂಪನಿ, ಲಿಮಿಟೆಡ್ ನ ಮಾದರಿಗಳಲ್ಲಿ ಕಂಡುಬಂದಿದೆ ಎಂದು ಹೇಳಲಾದ ಟೀಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಹೇಳಿದೆ.
ಕಳೆದ ವಾರ, ಸರ್ಕಾರಿ ಸ್ವಾಮ್ಯದ ಸಿಲೋನ್ ರಸಗೊಬ್ಬರ ಕಂಪನಿ ಲಿಮಿಟೆಡ್ ಕಲುಷಿತವಾದ ಸಾವಯವ ರಸಗೊಬ್ಬರದ ಸಾಗಣೆ ಸಂಬಂಧಿಸಿ ಕ್ವಿಂಗ್ಡಾವೊ ಸೀವಿನ್ ಬಯೋಟೆಕ್ ಗೆ ಪಾವತಿಯನ್ನು ನಿರ್ಬಂಧಿಸಲು ನ್ಯಾಯಾಲಯದ ಆದೇಶವನ್ನು ಪಡೆದಿದೆ. ಕೊಲಂಬೊ ವಾಣಿಜ್ಯ ಹೈಕೋರ್ಟ್ ಅಕ್ಟೋಬರ್ 22 ರಂದು ಕ್ವಿಂಗ್ಡಾವೊ ಸೀವಿನ್ ಬಯೋಟೆಕ್, ಅದರ ಸ್ಥಳೀಯ ಏಜೆಂಟ್ ಮತ್ತು ಪೀಪಲ್ಸ್ ಬ್ಯಾಂಕ್ ವಿರುದ್ಧ ಆದೇಶ ಹೊರಡಿಸಿತ್ತು.
ಚೀನಾದ ಬದಲಿಗೆ ಭಾರತದಿಂದ ರಸಗೊಬ್ಬರ ಆಮದು ಮಾಡಿಕೊಳ್ಳಲು ಕೊಲಂಬೊ ನಿರ್ಧರಿಸಿದೆ. ಅಕ್ಟೋಬರ್ 20 ರಂದು, ಭಾರತದಿಂದ ನ್ಯಾನೋ ನೈಟ್ರೋಜನ್ ದ್ರವ ರಸಗೊಬ್ಬರದ ಮೊದಲ ಸರಕು ಸಾಗಣೆ ಪ್ರಾರಂಭವಾಗಿದೆ. ಭತ್ತದ ಕೃಷಿ ಮಾಡುತ್ತಿರುವ ರೈತರಿಗೆ ವಿತರಿಸಲು ಕತುನಾಯಕೆಯಲ್ಲಿರುವ ಬಂದರಾನಾಯ್ಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
100,000 ಲೀಟರ್ ಗಳ ಸರಕನ್ನು ಶ್ರೀಲಂಕಾದ ಏರ್ ಲೈನ್ಸ್ ಎ330-300 ವಿಮಾನದಲ್ಲಿ ತರಲಾಗಿದೆ ಮತ್ತು ಇದು ಶ್ರೀಲಂಕಾಕ್ಕೆ ಆಮದು ಮಾಡಿಕೊಳ್ಳಲಾಗುವ 3.1 ದಶಲಕ್ಷ ಲೀಟರ್ ನ್ಯಾನೋ ರಸಗೊಬ್ಬರಗಳಲ್ಲಿ ಮೊದಲನೆಯದು.
ಭಾರತದಿಂದ ಕಳುಹಿಸಲಾದ ಸಾವಯವ ರಸಗೊಬ್ಬರ ಮಾದರಿಗಳ ಮೇಲೆ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳು ಶ್ರೀಲಂಕಾದಲ್ಲಿ ಬಳಕೆಗೆ ಸೂಕ್ತವಾಗಿದೆ ಎಂಬುದು ದೃಢವಾಗಿದೆ ಎಂದು ಕೃಷಿ ಸಚಿವ ಮಹಿಂದಾನಂದ ಅಲುತ್ಗಮಗೆ ಸಂಸತ್ತಿಗೆ ತಿಳಿಸಿದರು.