ಗೋಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ: ಹಸುಗಳಿಗೆ ಪೂಜೆ, ಸಹಪಾಠಿಗಳಿಗೆ ರಾಖಿ ಕಟ್ಟಿ ಭಾವೈಕ್ಯತೆಯ ಸಂದೇಶ
ಲೋಕದರ್ಶನ ವರದಿ
ಮಹಾಲಿಂಗಪುರ 28 : ಮಹಾಲಿಂಗಪುರದ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. 10ನೇ ತರಗತಿಯ ವಿದ್ಯಾರ್ಥಿನಿಯರು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ಥಳೀಯ ಗುರು ಮಹಾಲಿಂಗೇಶ್ವರ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿನಿಯರು ಹಸುಗಳಿಗೆ ಹಣ್ಣು-ಹಂಪಲು ಹಾಗೂ ಆಹಾರ ನೀಡುವ ಮೂಲಕ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ವಿಶೇಷ ಸ್ಥಾನವನ್ನು ಪರಿಚಯಿಸುವುದರ ಜೊತೆಗೆ, ಪ್ರಾಣಿ-ಪಕ್ಷಿಗಳ ಮೇಲೆಯೂ ಪ್ರೀತಿ, ದಯೆ ಮತ್ತು ಕರುಣೆ ಹೊಂದಿರಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ನಂತರ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೆ ರಾಖಿ ಕಟ್ಟಿ ಅಣ್ಣ-ತಂಗಿಯರ ಬಾಂಧವ್ಯದ ಮಹತ್ವವನ್ನು ಸ್ಮರಿಸಿದರು. ರಾಖಿ ಕೇವಲ ಒಂದು ದಾರವಲ್ಲ; ಅದು ಪ್ರೀತಿ, ವಿಶ್ವಾಸ, ರಕ್ಷಣೆ ಮತ್ತು ಆತ್ಮೀಯತೆಯ ಸಂಕೇತ ಎಂಬ ಭಾವನೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕ ಸಿದ್ಧಯ್ಯ ಮಠದ, ಶ್ರೀಶೈಲ ಮಠದ, ಮುಖ್ಯೋಪಾಧ್ಯಾಯ ಎಸ್.ಜಿ. ಕೌಜಲಗಿ ಹಾಗೂ ಶಿಕ್ಷಕರಾದ ಎಸ್.ಬಿ. ಮಠಗಾರ, ಆರಿ್ಜ. ಹುಡ್ಡಾರ ಸೇರಿದಂತೆ ಇತರ ಶಿಕ್ಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ವಿನೂತನ ಹಾಗೂ ಭಾವಪೂರ್ಣ ಆಚರಣೆಯನ್ನು ಶ್ಲಾಘಿಸಿದರು.