ಮಳೆ ಅವಾಂತರ: ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆ

ಮಳೆ ಅವಾಂತರ: ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆ

 
ಪುಣೆ, ಜುಲೈ 24 ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶನಿವಾರ 136 ಕ್ಕೆ ಏರಿದೆ.
 ಕಳೆದ ಎರಡು ದಿನಗಳಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಅನೇಕ ಕಡೆ ಭೂಕುಸಿತಗಳು ಉಂಟಾಗಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯಾದ್ಯಂತ ಮಳೆ ಸುರಿಯುತ್ತಿರುವುದರಿಂದ ಪುಣೆ ವಿಭಾಗದಲ್ಲಿ ಸುಮಾರು 84,452 ಜನರನ್ನು ಇಂದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
 ಪಿಐಬಿ ಪ್ರಕಟಣೆಯಂತೆ, ರಾಜ್ಯದಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಸೇನೆ `ಆಪರೇಷನ್ ವರ್ಷ 21 ' ಅನ್ನು ಆರಂಭಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 15 ತಂಡಗಳನ್ನು ನಿಯೋಜಿಸಿದೆ.
 
ಈ ಮಧ್ಯೆ, ಭಾರತೀಯ ಹವಾಮಾನ ಇಲಾಖೆ ಸತಾರಾ ಜಿಲ್ಲೆಗೆ 'ರೆಡ್ ಅಲರ್ಟ್' ನೀಡಿದ್ದು, ಮುಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.  ಈ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತಗಳಿಂದ ಸುಮಾರು 30 ಜನರು ಕಾಣೆಯಾಗಿದ್ದಾರೆ.
 ಪುಣೆ ಮತ್ತು ಕೊಲ್ಹಾಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆ, `ಆರೇಂಜ್ ಅಲರ್ಟ್ 'ನೀಡಿದೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸತಾರಾ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
 ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಹತ್ತಿರದ ಸಂಬಂಧಿಗಳಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ರಾಯಗಢದಲ್ಲಿ ಭೂಕುಸಿತದಿಂದ ಮೃತಪಟ್ಟವರ ಹತ್ತಿರದ ಸಂಬಂಧಿಗಳಿಗೆ 2 ಲಕ್ಷ ರೂ. ಗಾಯಗೊಂಡವರಿಗೆ 50,000 ರೂ ಪರಿಹಾರವನ್ನು ಪ್ರಧಾನಿ ನರೇಂದ್ರಮೋದಿ ಪ್ರಕಟಿಸಿದ್ದಾರೆ.   
 ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತಗಳಿಗೆ ನೆರವಾಗಲು ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್ ಸಜ್ಜಾಗಿದೆ.

ಸುದ್ದಿ ಓದಿ