ದೈಹಿಕ ಕ್ರೀಡೆಯಿಂದ ಮಾನಸಿಕ ವೃದ್ಧಿ: ಶಾಸಕ ಹಾಲಪ್ಪ ಆಚಾರ್
ಯಲಬುರ್ಗಾ 20: ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ದೈಹಿಕ ಮತ್ತು ಮಾನಸಿಕ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸ.ಪ.ಪೂ ಕಾಲೇಜಿನ ಆವರಣದಲ್ಲಿ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಕೂಟಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಕ್ರೀಡಾಸ್ಪೂರ್ತಿ ಮೆರೆಯಬೇಕು. ಆರೋಯವಂತ ಸಮಾಜ ಕಟ್ಟುವಲ್ಲಿ ಕ್ರೀಡೆ ಪೂರಕವಾಗಿಲಿದೆ ಎಂದರು.
ಯಲಬುರ್ಗಾ ಮತ್ತು ಕುಕನೂರಿನಲ್ಲಿ ನೂತನ ಮಹಿಳಾ ಪದವಿ ಪೂರ್ವ ಕಾಲೇಜುಗಳನ್ನು ಶೀಘ್ರದಲ್ಲಿ ಪ್ರಾರಂಭವಾಗಲಿದೆ. ನನ್ನ ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಶಾಲಾ ಕಾಲೇಜುಗಳಿಗೆ ಪ್ರಮುಖ ಆದ್ಯತೆ ನೀಡಿದ್ದು, ಸುಮಾರು ಮುನ್ನೂರಕ್ಕೂ ಅಧಿಕ ಕೊಠಡಿಗಳನ್ನು ನೀಡಿದ್ದೇವೆ. ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಭೋದನೆಯನ್ನು ಮಾಡಬೇಕು ಎಂದರು.
ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳನ್ನು ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಶಾಸಕ ಹಾಲಪ್ಪ ಆಚಾರ್ ಅವರು ಇವತ್ತು ಕ್ಷೇತ್ರದ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷ ದೇವೇಂದ್ರಗೌಡ ಮಾಲಿಪಾಟೀಲ್, ತಾಪಂ ಸದಸ್ಯ ಕೆಂಚಮ್ಮ ಭಾವಿಕಟ್ಟಿ, ರಾಬಕೊ ಉಪಾದ್ಯಕ್ಷ ಶಿವಪ್ಪ ವಾದಿ, ಗ್ರಾಪಂ ಉಪಾಧ್ಯಕ್ಷೆ ಬಿ.ಸುನಿತಾ ಮುದೇಗೌಡ್ರ, ಸದಸ್ಯರಾದ ಮಹಾಂತೇಶ ವಾದಿ, ರವಿಚಂದ್ರ ಭಾವಿಕಟ್ಟಿ, ಮುಖಂಡರಾದ ಕಳಕಪ್ಪ ಕಂಬಳಿ, ರತನ್ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್, ಲೋಕನಾಥ, ಅಮರೇಶ ವಾದಿ, ಪ್ರಾಚಾರ್ಯ ಸಂಘದ ಅಧ್ಯಕ್ಷ ಡಾ.ಎಚ್.ಜಿ.ನೀಲಗೇರಿ, ಡಿ.ಬಿ.ಗಡೇದ, ಮುಕುಂದ ಭಗವತಿ, ಪ್ರಾಚಾರ್ಯ ಎಚ್.ಎಚ್.ಜೈನಾಪುರ, ಸೋಮನಗೌಡ ಪಾಟೀಲ, ಶೇಖರಗೌಡ ರಾಮತಾಳ ಇತರರಿದ್ದರು.