ಮನೆಹಾನಿ ಪರಿಹಾರ ತಕ್ಷಣವೇ ನೀಡಿ

ಮನೆಹಾನಿ ಪರಿಹಾರ ತಕ್ಷಣವೇ ನೀಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ: ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ 

ಬೆಳಗಾವಿ, ಆ.2: ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಮನೆಗಳ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಅತೀ ಹೆಚ್ಚು ಬೇಡಿಕೆಗಳು ಬರುತ್ತವೆ. ಆದ್ದರಿಂದ ಅತಿವೃಷ್ಟಿಯಾದ ಸಂದರ್ಭದಲ್ಲಿ ಕೂಡಲೇ ತಾಂತ್ರಿಕ ತಂಡಗಳನ್ನು ನಿಯೋಜಿಸಿ ಆದಷ್ಟು ಬೇಗ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಅತಿವೃಷ್ಟಿ ಹಿನ್ನೆಲೆಯಲ್ಲಿ ಬೆಳಗಾವಿ ಸೇರಿದಂತೆ ಹನ್ನೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಂಗಳವಾರ(ಆ.2) ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. 

ಮನೆಹಾನಿಯಾದ ಸಂದರ್ಭದಲ್ಲಿ ಯಾವುದೇ ಕುಟುಂಬಗಳು ಪರಿಹಾರದಿಂದ ವಂಚಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು. 

ಖಾನಾಪುರದಲ್ಲಿ ಮಳೆ ಜಾಸ್ತಿಯಾದಾಗ ಮಲಪ್ರಭಾ ನದಿ ನೀರು ಹರಿವು ಹೆಚ್ಚಾಗುತ್ತದೆ. ಆದ್ದರಿಂದ ನಿರಂತರ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. 

ಮಹಾರಾಷ್ಟ್ರದ ಲ್ಲಿ ಆಗುತ್ತಿರುವ ಮಳೆಯ ವಿವರ ಪಡೆದುಕೊಂಡ ಅವರು, ಕೊಯ್ನಾ, ರಾಜಾಪುರ ಸೇರಿದಂತೆ ಪ್ರತಿಯೊಂದು ಜಲಾಶಯಗಳ ಮಟ್ಟ ಹಾಗೂ ನೀರು ಬಿಡುಗಡೆಯ ಕುರಿತು ನಿಗಾ ವಹಿಸಬೇಕು ಎಂದು ತಿಳಿಸಿದರು. 

ಪ್ರಕೃತಿ ವಿಕೋಪ ನಿರ್ವಹಣೆ; ಪೂರ್ವ ಸಿದ್ಧತೆಗೆ ಸೂಚನೆ: 

ಅತಿವೃಷ್ಟಿಯಾಗುತ್ತಿರುವ ಹನ್ನೊಂದು ಜಿಲ್ಲೆಗಳಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆ ಹಾಗೂ ಜನರ ರಕ್ಷಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. 

ಭೂಕುಸಿತ, ಗುಡ್ಡಕುಸಿತ ಸಂಭವಿಸಬಹುದಾದ ಸ್ಥಳ ಹಾಗೂ ಗ್ರಾಮಗಳನ್ನು ಗುರುತಿಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. 

ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. 

ಮನೆಗಳಿಗೆ ನೀರು ನುಗ್ಗಿದ್ದರೆ ಕೂಡಲೇ ಪರಿಹಾರ ನೀಡಬೇಕು. ಗುಡ್ಡಕುಸಿತ ಸಂಭಾವ್ಯ ಇರುವ ಕಡೆಗಳಲ್ಲಿ ಕೂಡಲೇ ಅಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಅತಿವೃಷ್ಟಿಯಿಂದ ಮನೆಗಳು ಕುಸಿತಗೊಂಡಾಗ ತಕ್ಷಣವೇ ಪರಿಹಾರ ನೀಡಬೇಕು. ಒಂದು ವೇಳೆ ಹಣದ ಕೊರತೆ ಇದ್ದರೆ ಕೂಡಲೇ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. 

ಮನೆಗಳ ಹಾನಿ ಉಂಟಾದಾಗ ಸಂಬಂಧಿಸಿದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಲು ಸರಕಾರ ಬದ್ಧವಿದೆ. ಜಿಲ್ಲಾಧಿಕಾರಿಗಳು ಕೋರಿಕೆ ಸಲ್ಲಿಸಿದಲ್ಲಿ ಪರಿಹಾರ ಹಣವನ್ನು ಕೂಡಲೇ ಆಯಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲರೂ ಜಾಗ್ರತೆಯಿಂದ ಕೆಲಸ ಮಾಡಬೇಕು. ಹಣಕಾಸು ನೆರವು ಸೇರಿದಂತೆ ಏನೇ ಅಗತ್ಯವಿದ್ದರೆ ತಕ್ಷಣ ಗಮನಕ್ಕೆ ತರಬೇಕು ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಶೇ.41 ಹೆಚ್ಚಿಗೆ ಮಳೆ: 

ಬೆಳಗಾವಿ ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಶೇ.21 ರಷ್ಟು ಮಳೆ ಕಡಿಮೆಯಾಗಿದ್ದು, ಜುಲೈನಲ್ಲಿ ವಾಡಿಕೆ ಮಳೆ 191 ಮೀ.ಮೀ. ಇದ್ದು ವಾಸ್ತವ ಮಳೆ 269 ಮಿ.ಮೀ. ಅಂದರೆ ಶೇ.41 ರಷ್ಟು ಹೆಚ್ಚಿನ ಮಳೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿಯನ್ನು ನೀಡಿದರು. 

2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪೂರ್ಣ 10 ಭಾಗಶಃ 284 ಹಾಗೂ 981 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿರುತ್ತದೆ. 

324 ಹೆಕ್ಟೇರ್ ಕೃಷಿ ಬೆಳೆ ಹಾಗೂ 10.07 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿರುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು. 

ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ಸೇರಿದಂತೆ ಎಲ್ಲ ನದಿಗಳ ಹರಿವು ಮತ್ತು ಮಳೆಯ ಪ್ರಮಾಣದ ಮೇಲೆ ನಿರಂತರ ನಿಗಾವಹಿಸಲಾಗಿದೆ. 

ನೆರೆಯ ಮಹಾರಾಷ್ಟ್ತ ರಾಜ್ಯದ ಕೊಯ್ನಾ ಶೇ.62 ಭರ್ತಿಯಾಗಿದೆ. ಆ ರಾಜ್ಯದ ಇತರೆ ಜಲಾಶಯಗಳ ಸಂಗ್ರಹ ಮತ್ತು ನೀರು ಬಿಡುಗಡೆ ಕುರಿತು ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. 

ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್‌.ವಿ., ಅಪರ ಜಿಲ್ಲಾಧಿಕಾರಿ ಆಶೋಕ ದುಡಗುಂಟಿ, ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕೂಲೇರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.  

ಮನೆಹಾನಿ ನಿಖರ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ: 

ಮನೆಹಾನಿ ಸಮೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಮತ್ತು ತಂಡದವರು ಕಾಲಮಿತಿಯಲ್ಲಿ ನಿಖರವಾದ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಕೆಲಸದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಅಂತಹವರನ್ನು ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು. 

ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. 

ಅತಿವೃಷ್ಟಿಯಿಂದ ಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದರೆ ಸಂದರ್ಭದಲ್ಲಿ ತಕ್ಷಣವೇ ಸಮೀಕ್ಷೆ ಕೈಗೊಂಡು ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಸಕಾಲದಲ್ಲಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಅರ್ಹ ಕುಟುಂಬಗಳು ಯಾವುದೇ ಕಾರಣಕ್ಕೂ ಪರಿಹಾರದಿಂದ ವಂಚಿತಗೊಳ್ಳದಂತೆ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ತಂಡದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.  

ಇದಲ್ಲದೇ ರಸ್ತೆ, ಸೇತುವೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದರೆ ಕೂಡಲೇ ದುರಸ್ತಿ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. 


ಸುದ್ದಿ ಓದಿ