ಗ್ರಾಮೀಣ ಸೊಗಡು-ಜನಪದ ಸಂಸ್ಕೃತಿ ಉಳಿಸಿ-ಬೆಳೆಸಿ

ಗ್ರಾಮೀಣ ಸೊಗಡು-ಜನಪದ ಸಂಸ್ಕೃತಿ ಉಳಿಸಿ-ಬೆಳೆಸಿ

ಲೋಕದರ್ಶನ ವರದಿ 

ವಿಜಯಪುರ 12: ಗರತಿಯ ಹಾಡುಗಳು’ ನಮ್ಮ ನಾಡಿನ ಸ್ತ್ರೀ ಜೀವನದ ಒಳಗನ್ನಡಿ. ಅದು ನಮ್ಮ ಹೆಣ್ಣು ಮಕ್ಕಳ ಹೃದಯದ ಪಡಿಗನ್ನಡಿ ಇದ್ದಂತೆ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಂಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಕೌಟುಂಬಿಕ ರಸವು ಪರಿಪಾಕಗೊಂಡಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದೆ. ಮದುವೆ-ಮುಂಜಿ, ಸೋಬಾನ, ಸೀಮಂತ, ತೊಟ್ಟಿಲು ಕಾರ್ಯಕ್ರಮದಂತಹ ಸಂದರ್ಭದಲ್ಲಿ ಸ್ತ್ರೀಯರು ಒಡುಪು ಹೇಳುವ ಮೂಲಕ ತಂದೆ-ತಾಯಿ, ಗಂಡ-ಹೆಂಡತಿ ಇವರ ಗುಣವಿಶೇಷತೆ, ಕೀರ್ತಿ, ಗೌರವ ಮತ್ತು ವರ್ಣಿಸುತ್ತಾಳೆ. ಆದ್ದರಿಂದ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಮಾಯವಾಗುತ್ತಿರುವ ಒಡುಪು ಹೇಳುವ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದು ವಿಜಯಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೊ. ಎಸ್‌.ಬಿ.ಕುಂಬಾರ ಅವರು ಅಭಿಪ್ರಾಯಪಟ್ಟರು.  

ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ದಿ. 11ರಂದು ಆಯೋಜಿಸಿದ್ದ ‘ಒಡುಪು ಹೇಳುವ ಸ್ಪರ್ಧೆ' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.   

ಅವರು ಮಾತನಾಡುತ್ತಾ, ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ತೊಟ್ಟೀಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ. ಆಕೆಯು ಮದುವೆಯಾದ ನಂತರ ತವರುಮನೆ, ಗಂಡನ ಮನೆಯಲ್ಲಿ ಹೇಗೆ ಸಂಸಾರ ಮಾಡಬೇಕೆಂಬ ಬಗ್ಗೆ ಹಾಡುಗಳ ಮೂಲಕ ಕಿವಿಮಾತು ಹೇಳುತ್ತಾ, ಆಕೆಗಿರುವ ಸ್ಥಾನಮನ, ಗೌರವಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗರತಿಯ ಹಾಡುಗಳು ಪ್ರಮುಖ ಪಾತ್ರವಹಿಸುತ್ತಿದ್ದವು ಎಂದರು. 

 ಈ ಒಡುಪು ಸ್ಪರ್ಧೆಯಲ್ಲಿ ಸ್ತ್ರೀಯರು ‘ಕಟಗಲ ರೊಟ್ಟಿ, ಕಾರದ ಚಟ್ನಿ ಕಟಗೊಂಡ ಹೋಗಂದ್ರ ಸೆಟಗೊಂಡ ಹೋಗತಾರ (ಗಂಡನ ಹೆಸರು)... ‘ಎಡೆಯೂರ ಸಿದ್ದಲಿಂಗೇಶ್ವನ ಹಿಂದೆ ಇರುವುದು ಹುತ್ತ, ಮುತ್ತೈದೆ ಮೂಗನಲ್ಲಿರುವುದು ನತ್ತುಮ ನಾನು ಆರತಿ ಮಾಡಿ ಹೆಸರ ಹೇಳತಿನಿ (ಗಂಡನ ಹೆಸರು)... ಮೂರಸಂಜೆ ಹೊತ್ತು... ಹೀಗೆ ಸ್ತ್ರೀ ತನ್ನ ಪತಿದೇವರ ಹೆಸರನ್ನು ಹೇಳುತ್ತಾ, ವೈಶಿಷ್ಟ್ಯತೆ ಹೊಂದಿದ ನಮ್ಮ ಜನಪದ ಸಂಸ್ಕೃತಿಯ ಒಡಪು ಹೇಳುವ ಸ್ಪರ್ಧೆಯಲ್ಲಿ ಮಹಿಳೆಯರು ತಮ್ಮ ಗಂಡನ ಹಾಗೂ ಪುರುಷರು ತಮ್ಮ ಪತ್ನಿಯ ಹೆಸರನ್ನು ಅರ್ಥಪೂರ್ಣವಾದ ಒಡಪನ್ನು ಹೇಳಿ ಪ್ರೇಕ್ಷಕರ ಮನರಂಜಿಸಿದರು.  

ಈ ಒಡಪು ಸ್ಪರ್ಧೆಯಲ್ಲ ಒಟ್ಟು 12 ಜನ ಮಹಿಳೆಯರು ಹಾಗೂ 03 ಜನ ಪುರುಷರು ಭಾಗವಹಿಸಿ, ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನಪದದ ಸೊಗಡು, ಭಾಷೆ-ಸಂಸ್ಕೃತಿ, ಸಂಸ್ಕಾರ ಮತ್ತು ಸರಸಪ್ರಾಯವಾದ ಒಡುಪು ಸ್ಪರ್ಧೆಯಲ್ಲಿ ಮಹಿಳೆಯರು ಪತಿಯ ಗುಣವಿಶೇಷತೆಗಳನ್ನು ಅರ್ಥಗರ್ಭಿತ ನುಡಿಗಳಲ್ಲಿ ವರ್ಣಿಸಿದರು. ಈ ಸ್ಪರ್ಧೆಯಲ್ಲಿ ಲಕ್ಷ್ಮೀ. ಬಸವರಾಜ. ಕುಂಬಾರ ಇವರು 21 ಒಡುಪು ಹೇಳಿ ಪ್ರಥಮ ಸ್ಥಾನ ಪಡೆದರು. ಗೌರಮ್ಮ ತೆಲಸಂಗ ಇವರು 14 ಒಡುಪು ಹೇಳಿ ದ್ವಿತೀಯ ಸ್ಥಾನ ಮತ್ತು ಸಾವಿತ್ರಿ ಹಿರೇಮಠ ತೃತೀಯ ಸ್ಥಾನ ಪಡೆದರು.  

ಈ ಒಡುಪು ಸ್ಪರ್ಧೆಯಲ್ಲಿ ಸಾಹಿತಿಗಳಾದ ಪ್ರೊ. ಎಂ.ಎಸ್‌.ಖೊದ್ನಾಪೂರ, ಪ್ರೊ. ಎಸ್‌.ಬಿ.ಕುಂಬಾರ ಮತ್ತು ನಿವೃತ್ತ ಪ್ರಾಂಶುಪಾಲರಾದ ಕೆ.ಜೆ.ಕೋಟ್ಯಾಳ ಇವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ನವರಸಪುರದ ನೂರಾರು ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಿದ್ದರು. 


ಸುದ್ದಿ ಓದಿ