ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ತಾಲೂಕು ಆಡಳಿತಗಳು ಸಿದ್ಧತೆ ಮಾಡಿಕೊಳ್ಳಿ

ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ತಾಲೂಕು ಆಡಳಿತಗಳು ಸಿದ್ಧತೆ ಮಾಡಿಕೊಳ್ಳಿ
ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ತಾಲೂಕು ಆಡಳಿತಗಳು ಸಿದ್ಧತೆ ಮಾಡಿಕೊಳ್ಳಿ ಗದಗ 03: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಆಗುವ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗುವ ಜೀವ ಹಾನಿ ತಡೆಯಲು ಮತ್ತು ಸಮರ್ಪಕ ನಿರ್ವಹಣೆಗೆ ತಾಲೂಕು ಆಡಳಿತಗಳು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹೇಳಿದರು. ಜಿಲ್ಲಾ ಪಂಚಾಯತ್ ವಿಡಿಯೋ ಸಭಾಂಗಣದಲ್ಲಿ ( ಶುಕ್ರವಾರ) ಜರುಗಿದ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ಆಡಳಿತಗಳು ಪ್ರವಾಹ ಪರಿಸ್ಥಿತಿ ನಿಭಾವಣೆಗೆ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಪ್ರತಿವಾರ ಸಭೆ ನಡೆಸಿ ಚರ್ಚಿಸಿ ಯೋಜನೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಪ್ರವಾಹ ತಲೆದೋರಿದ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಜನ ಜಾನುವಾರುಗಳ ಜೀವ ಹಾನಿ ತಡೆಯಲು ಮುಂದಾಗಬೇಕು ಎಂದರು. ಪ್ರವಾಹದಿಂದ ನೀರು ಮನೆಗೆ ನುಗ್ಗಿ ಆಗಬಹುದಾದ ಅನಾಹುತವನ್ನು ತಡೆಯಲು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ನೆರೆ ಸಂತ್ರಸ್ಥರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಹಾಗೂ ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಲಭ್ಯವಿರುವಂತೆ ಮತ್ತು ಕಾಳಜಿ ಕೇಂದ್ರಕ್ಕೆ ಆಗಮಿಸುವ ಸಂತ್ರಸ್ತರ ಆರೋಗ್ಯ ಕುರಿತು ನಿಗಾ ವಹಿಸಬೇಕು. ಅಗತ್ಯದ ಔಷಧೋಪಚಾರ ವ್ಯವಸ್ಥೆಯನ್ನು ಮೊದಲೇ ಸಂಗ್ರಹ ಮಾಡಿಟ್ಟುಕೊಳ್ಳಬೇಕೆಂದು ತಾಲೂಕು ಆಡಳಿತಗಳಿಗೆ ನಿರ್ದೇಶಿಸಿದರು. ಅತಿವೃಷ್ಟಿ ಹಾಗೂ ಪ್ರವಾಹದಿಂದಾಗುವ ಮನೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ತಂಡಗಳನ್ನು ರಚಿಸಿಕೊಳ್ಳಿ. ಈ ತಂಡಗಳು ತಕ್ಷಣ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿ ಹಾನಿಯಾಗಿರುವ ಮನೆಗಳ ಸಮೀಕ್ಷೆ ನಡೆಸಿ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇದೇ ರೀತಿ ಬೆಳೆ ಹಾನಿಯಾದಲ್ಲಿ ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವ ಮೂಲಕ ಬೆಳೆ ಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಸದ್ಯ ಮುಂಗಾರು ಬಿತ್ತನೆ ಆರಂಭವಾಗಿರುವುದರಿಂದ ರೈತರಿಗೆ ಬಿತ್ತನೆಗೆ ಅಗತ್ಯವಿರುವ ಬೀಜ ಗೊಬ್ಬರ ಹಾಗೂ ಕೀಟನಾಶಕಗಳ ಕೊರತೆಯಾಗದಂತೆ ದಾಸ್ತಾನು ಮಾಡುವ ಮೂಲಕ ಸಮರ್ಪಕ ವಿತರಣೆ ಮಾಡಬೇಕು. ಅದೇ ತರಹ ರೈತರು ಬೆಳೆದ ಬೆಳೆಗೆ ವಿಮಾ ಕಂತು ಪಾವತಿಸುವ ಕುರಿತು ಅರಿವು ಮೂಡಿಸುವ ಮೂಲಕ ರೈತರ ವಿಮಾ ಕಂತು ಪಾವತಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲಾದ್ಯಂತ ಲಸಿಕಾಕರಣ ನಡೆಯುತ್ತಿದ್ದು ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸೂಚಿಸಲಾಗಿದೆ. ಜಿಲ್ಲೆಗೆ ಹಂಚಿಕೆಯಾಗಿರುವ ಲಸಿಕೆ ಪ್ರಮಾಣದ ಅನುಸಾರವಾಗಿ ಆದ್ಯತೆ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಲಸಿಕಾಕರಣ ಮಾಡಬೇಕು. ಅದೇ ರೀತಿಯಾಗಿ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನಿಯೋಜಿತ ಪರೀಕ್ಷಾ ಸಿಬ್ಬಂದಿಗಳಿಗೂ ಸಹ ಲಸಿಕೆ ನೀಡಬೇಕು. ಈ ಬಗ್ಗೆ ಆರೋಗ್ಯ ಇಲಾಖಾಧಿಕಾರಿಗಳು ಮತ್ತು ತಹಶೀಲ್ದಾರರು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಪ್ರವಾಹ ಪರಿಸ್ಥಿತಿಯಿಂದಾಗುವ ಜನ ಜಾನುವಾರು ಹಾನಿ ತಡೆಗೆ ಸ್ಥಳೀಯ ಅಧಿಕಾರಿಗಳು ಮುಂದಾಗಬೇಕು. ಶಿಥಿಲಾವಸ್ಥೆಯಲಿರುವ ಮನೆಗಳಲ್ಲಿ ವಾಸಿಸುವವರನ್ನು ಹಾಗೂ ತಗ್ಗು ಪ್ರದೇಶದ ಮನೆಗಳಲ್ಲಿರುವವರನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಗ್ರಾಮೀಣ ಪ್ರದೇಶದ ಚರಂಡಿ ಹಾಗೂ ಮುಖ್ಯ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಮುಂದೆ ಸಾಗುವಂತೆ ಸ್ವಚ್ಛತೆ ಕಾರ್ಯ ಗ್ರಾಮ ಪಂಚಾಯತ್‍ಗಳಿಂದ ಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ , ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಡಿ.ಡಿ.ಎಲ್.ಆರ್. ರವಿಕುಮಾರ್, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಸ ಬಸರಿಗಿಡದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್ , ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸುದ್ದಿ ಓದಿ