ಬನಹಟ್ಟಿಯಲ್ಲಿ ಪೊಲೀಸ್ ಪಡೆ, ಶಸ್ತ್ರ ಸಜ್ಜಿತ ಪಡೆ ಪಥಸಂಚಲನ
ರಬಕವಿ-ಬನಹಟ್ಟಿ : ಮೇ. 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬನಹಟ್ಟಿ ನಗರಕ್ಕೆ ಆಗಮಿಸಿದ ಶಸ್ತ್ರ ಸಜ್ಜಿತ ಪಡೆ ಮತ್ತು ಸ್ಥಳೀಯ ಪೊಲೀಸ್ ಪಡೆ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ಬನಹಟ್ಟಿ ನಗರದ ಡಾಗಾ ಮನೆಯಿಂದ ಸೋಮವಾರ ಪೇಟೆ, ಮಂಗಳವಾರ ಪೇಟೆ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
ಸಾರ್ವಜನಿಕರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು. ವಿಧಾನಸಭಾ ಚುನಾವಣೆಯನ್ನು ಅತ್ಯಂತ ಶಾಂತಿ ಮತ್ತು ಸುವ್ಯವಸ್ಥೆಯಿಂದ ಯಾವದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಪರಿಪಾಲನೆ ಮಾಡಬೇಕು. ಯಾವುದೇ ರೀತಿಯ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಶಿಕ್ಷೆ ನೀಡಲೇಬೇಕಾಗುತ್ತದೆ ಎಂದು ತಿಳಿಸಲಾಯಿತು.
ಪರೇಡ್ನಲ್ಲಿ ಸಾಗಿದ ಸೈನಿಕರಿಗೆ ಹಿಂದು-ಮುಸ್ಲಿಮ್ ಸಮುದಾಯದ ನಾಗರಿಕರು ಪುಷ್ಪಮಳೆಗರೆದು ಗೌರವಿಸಿದರು. ಸಿಪಿಐ ಪಾಟೀಲ, ಬನಹಟ್ಟಿ, ತೇರದಾಳ ಮತ್ತು ಮಹಾಲಿಂಗಪುರ ಠಾಣಾಧಿಕಾರಿಗಳು ನೇತೃತ್ವ ವಹಿಸಿದ್ದರು.