ಮಹಲಿಂಗಪುರ

ಜೀವ ಜಲ ಒದಗಿಸದೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಧಿಕಾರಿಗಳು: ಶೇಖರ್ ಅಂಗಡಿ ಆಕ್ರೋಶ

ಜೀವ ಜಲ ಒದಗಿಸದೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಧಿಕಾರಿಗಳು: ಶೇಖರ್ ಅಂಗಡಿ ಆಕ್ರೋಶ

ಲೋಕದರ್ಶನ ವರದಿ 

ಶೇಖರ ಅಂಗಡಿಯಿಂದ ಸ್ವಂತ ಖರ್ಚಿನಲ್ಲಿ ಪೈಪ್ ಲೈನ್ ಜೋಡಣೆ 

ಮಹಾಲಿಂಗಪುರ 25: ಬಿರುಬೇಸಿಗೆಯ ಕಡುಬಿಸಿಲಿನಿಂದ ಬಸವಳಿದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಪೈಪ್ ಲೈನ್ ಅಳವಡಿಸದೆ ಜನರಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತೆ ಮಾಡಿ ಜೀವಜಲ ಒದಗಿಸದೆ ಜನರ ಜೀವನದ ಜೊತೆ ಆಟವಾಡುತ್ತಿರುವ ಪುರಸಭೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುರಸಭಾ ಮಾಜಿ ಸದಸ್ಯ ಶೇಖರ ಅಂಗಡಿ ಒತ್ತಾಯಿಸಿದ್ದಾರೆ. 

ಸ್ಥಳೀಯ ಕೆಂಗೇರಿಮಡ್ಡಿಯ 13ನೇ ವಾರ್ಡಿನ ದುರ್ಗಾದೇವಿ ದೇವಸ್ಥಾನದ ಹತ್ತಿರ ಎರಡು ತಿಂಗಳ ಹಿಂದೆ ಪುರಸಭೆಯ 15ನೇ ಹಣಕಾಸು ಯೋಜನೆಯ ಉಳಿಕೆ ಅನುದಾನದಲ್ಲಿ ಬೋರ್ ವೆಲ್ ಕೊರೆಸಿದ್ದು ಪೈಪ್ ಲೈನ್ ಅಳವಡಿಸದೆ ಇದ್ದ ಕಾರಣ ಪುರಸಭಾ ಮಾಜಿ ಸದಸ್ಯ ಶೇಖರ ಅಂಗಡಿ ತಮ್ಮ ಸ್ವಂತ ಖರ್ಚಿನಲ್ಲಿ ಪೈಪ್ ಲೈನ್ ಅಳವಡಿಸಿ ಪುರಸಭೆ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು,ಬೇಸಿಗೆಯ ಈ ದಿನಗಳಲ್ಲಿ 39 ಡಿಗ್ರಿಗಿಂತಲೂ ಹೆಚ್ಚು ತಾಪಮಾನ ದಾಖಲಾಗಿದ್ದು ಈ ಭಾಗದ ಜನರು ನೀರಿಲ್ಲದೆ ಪರದಾಡುತ್ತಿದ್ದಾರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಪೈಪ್ ಲೈನ್ ಜೋಡಿಸಲು ಕೇಳಿದರೆ ಈಗ ಪುರಸಭೆಯಲ್ಲಿ ಯಾವುದೇ ಹಣವಿಲ್ಲ ಎಂದು ಅಸಡ್ಡೆಯ ಉತ್ತರ ನೀಡುತ್ತಿದ್ದು ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ನೀರು ಸಿಗುವಂತೆ ಮಾಡುವುದು ಅಧಿಕಾರಿಗಳ ಪ್ರಥಮ ಆದ್ಯತೆ ಆಗಿರುತ್ತದೆ ಆದರೆ ಇದು ಯಾವುದನ್ನು ಲೆಕ್ಕಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುತ್ತಪ್ಪ ಪಾತ್ರೋಟ, ಪರಶು ಪಾತ್ರೋಟ, ಆದಿತ್ಯ ಪೂಜಾರಿ, ಕೃಷ್ಟಾ ಪಾತ್ರೋಟ, ಪವನ ಪಾತ್ರೋಟ ಸೇರಿದಂತೆ ಇತರರಿದ್ದರು. 

 "ನಾವು ಯಾವುದೇ ರೀತಿಯ ಅಸಡ್ಡೆಯ ವರ್ತನೆ ಅಥವಾ ಉತ್ತರ ನೀಡಿರುವುದಿಲ್ಲ, ಮೇಲಾಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿದ್ದು ನಾಳೆಯೇ ಪೈಪ್ ಲೈನ್ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ" 

ನಾಮದೇವ ಲಮಾಣಿ,  

ಮುಖ್ಯಾಧಿಕಾರಿಗಳು, ಪುರಸಭೆ ಮಹಾಲಿಂಗಪುರ 


ಸುದ್ದಿ ಓದಿ