ಛಾಯಾಗ್ರಹಣ ಕೇವಲ ಚಿತ್ರವಲ್ಲ, ನೆನಪು ಮತ್ತು ಕಥೆಯನ್ನು ಹೇಳುವ ಕಲೆ
ಲೋಕದರ್ಶನ ವರದಿ
ಧಾರವಾಡ, ಆ.19: ಧಾರವಾಡದ ಗೂಡ್ಸೆಟ್ ಸಂಸ್ಥೆಯಲ್ಲಿ ಛಾಯಾಗ್ರಹಣ ಹಾಗೂ ವಿಡಿಯೋಗ್ರಫಿ ತರಬೇತಿ ನಡೆಯುತ್ತಿದ್ದು, 187ನೇ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಪೃಥ್ವಿರಾಜ ಜಿ.ಪಿ. ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಒಂದು ಫೋಟೋ ಕೇವಲ ಒಂದು ಚಿತ್ರವಲ್ಲ. ಅದು ಒಂದು ಕ್ಷಣ, ಒಂದು ನೆನಪು ಹಾಗೂ ಒಂದು ಕಥೆಯನ್ನು ತಿಳಿಸುತ್ತದೆ. ಸರಿಯಾದ ದೃಷ್ಟಿಕೋನದಲ್ಲಿ ಸೆರೆಹಿಡಿದ ಸಾಮಾನ್ಯ ಕ್ಷಣವೂ ಅಮೂಲ್ಯ ನೆನಪಾಗಿ ಉಳಿಯುತ್ತದೆ” ಎಂದು ಹೇಳಿದರು.
ಛಾಯಾಗ್ರಾಹಕನ ಕಲೆ ಮತ್ತು ದೃಷ್ಟಿಕೋನದ ಮಹತ್ವವನ್ನು ವಿವರಿಸಿದ ಅವರು, ಒಂದು ನಗು, ಒಂದು ಕಣ್ಣೀರು, ಒಂದು ಸೂರ್ಯಾಸ್ತ ಅಥವಾ ಸಾಮಾನ್ಯ ಕ್ಷಣವೂ ಛಾಯಾಚಿತ್ರದ ಮೂಲಕ ಶಾಶ್ವತ ನೆನಪಾಗಬಹುದು ಎಂದು ತರಬೇತಿದಾರರಿಗೆ ತಿಳಿಸಿದರು. ತಮ್ಮ ಛಾಯಾಗ್ರಹಣದ ಆಸಕ್ತಿಯನ್ನು ಹಲವು ಉದಾಹರಣೆಗಳ ಮೂಲಕ ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡು, 187ನೇ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಚನ್ನಪ್ಪ ದೇವಗಿರಿ, ಜಗದೀಶ ಪೂಜಾರ ಹಾಗೂ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಉಪನ್ಯಾಸಕ ಶಿವಾನಂದ ರಾಥೋಡ್, ಸಂಸ್ಥೆಯ ಅಧಿಕಾರಿಗಳಾದ ಮಾಧವರಾಜ ಭಟ್ ಹಾಗೂ ಮಹೇಶ್ ಗೌಡ ಉಪಸ್ಥಿತರಿದ್ದರು. ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಶಿಬಿರಾರ್ಥಿ ಮೈಲಾರಲಿಂಗ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಮನೋಜ್ ವಂದನಾರೆ್ಣ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 30 ಶಿಬಿರಾರ್ಥಿಗಳು ಭಾಗವಹಿಸಿದ್ದರು.