ರಾಷ್ಟ್ರೀಯ

ವೈಯಕ್ತಿಕ ದ್ವೇಷ: ಸಹೋದ್ಯೋಗಿ ಮೇಲೆ ಹಲ್ಲೆ ಬ್ಲಿಂಕಿಟ್‌ನ ನಾಲ್ವರು ಡೆಲಿವರಿ ಕಾರ್ಮಿಕರ ಬಂಧನ

ವೈಯಕ್ತಿಕ ದ್ವೇಷ: ಸಹೋದ್ಯೋಗಿ ಮೇಲೆ ಹಲ್ಲೆ ಬ್ಲಿಂಕಿಟ್‌ನ ನಾಲ್ವರು ಡೆಲಿವರಿ ಕಾರ್ಮಿಕರ ಬಂಧನ

ಗುರುಗ್ರಾಮ, ಅ. 8: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಹೋದ್ಯೋಗಿ ಹಾಗೂ ಆತನ ಇಬ್ಬರು ಸೋದರ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬ್ಲಿಂಕಿಟ್‌ನ ನಾಲ್ವರು ಡೆಲಿವರಿ ಕಾರ್ಮಿಕರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಚಿನ್, ದೇವರಾಜ್, ಶೋಭಿತ್ ಹಾಗೂ ಗೌರವ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಸಚಿನ್‌ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ದೇವರಾಜ್, ಶೋಭಿತ್ ಹಾಗೂ ಗೌರವ್ ಅವರನ್ನು ಅಕ್ಟೋಬರ್ 7ರಂದು ಗ್ವಾಲ್ ಪಹಾರಿ ಪ್ರದೇಶದಲ್ಲಿ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 29ರಂದು ರಾತ್ರಿ ಸುಮಾರು 9.10ಕ್ಕೆ ಬಲಿಯಾವಾಸ್‌ನಲ್ಲಿರುವ ಬ್ಲಿಂಕಿಟ್ ಮಳಿಗೆಯ ಹೊರಭಾಗದಲ್ಲಿ ದೂರುದಾರ ನಿಂತಿದ್ದ ವೇಳೆ ದೇವರಾಜ್, ಸಚಿನ್ ಸೇರಿದಂತೆ ಮೂರರಿಂದ ನಾಲ್ವರು ಆತನನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಒಬ್ಬರು ಕೋಲಿನಿಂದ ದೂರುದಾರನ ಬಲಗೈಗೆ ಹೊಡೆದಿದ್ದಾರೆ ಎನ್ನಲಾಗಿದೆ.

ದೂರುದಾರನ ಸೋದರ ಸಂಬಂಧಿಗಳಾದ ರಾಹುಲ್ ಮತ್ತು ರಾಜೇಶ್ ಅವರು ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆಗಾಗಿ ಡಿಎಲ್‌ಎಫ್ ಫೇಸ್-3ರ ನೀಲಕಂಠ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 30ರಂದು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಗ್ವಾಲ್ ಪಹಾರಿ ಪೊಲೀಸ್ ಪೋಸ್ಟ್‌ನ ತಂಡ ಆಸ್ಪತ್ರೆಗೆ ತೆರಳಿದರೂ, ವೈದ್ಯರು ದೂರುದಾರ ಹೇಳಿಕೆ ನೀಡಲು ಯೋಗ್ಯ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದರು.

ಮರುದಿನ ಪೊಲೀಸರು ದೂರುದಾರನ ಹೇಳಿಕೆ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷಾ ವರದಿಯನ್ನು ಪಡೆದುಕೊಂಡ ಬಳಿಕ ಡಿಎಲ್‌ಎಫ್ ಫೇಸ್-1 ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

ವಿಚಾರಣೆ ವೇಳೆ, ಆರೋಪಿಗಳು ಮತ್ತು ದೂರುದಾರರು ಎಲ್ಲರೂ ಬ್ಲಿಂಕಿಟ್‌ನಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ದೇವರಾಜ್, ಸಚಿನ್ ಹಾಗೂ ದೂರುದಾರನ ನಡುವೆ ನಡೆದಿದ್ದ ಜಗಳವೇ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿದ್ದು, ಇದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಅಕ್ಟೋಬರ್ 7ರಂದು ಬಂಧಿಸಲಾದ ದೇವರಾಜ್ ಮತ್ತು ಗೌರವ್ ಅವರು ಬಂಡ್ವಾರಿ ಪ್ರದೇಶದ ರಾವತ್ ಧಾನಿ ನಿವಾಸಿಗಳಾಗಿದ್ದು, ಶೋಭಿತ್ ಬಂಡ್ವಾರಿ ಗ್ರಾಮದ ವಾಲ್ಮೀಕಿ ದೇವಸ್ಥಾನದ ಸಮೀಪದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿಸಬೇಕಿದ್ದ ನಾಲ್ವರು ಆರೋಪಿಗಳನ್ನೂ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ದೂರುನಲ್ಲಿ ಉಲ್ಲೇಖಿಸಿರುವ ಇತರ ವ್ಯಕ್ತಿಗಳ ಪಾತ್ರ ಹಾಗೂ ಹಲ್ಲೆಗೆ ಸಂಬಂಧಿಸಿದ ಸಂಪೂರ್ಣ ಘಟನೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿ ಓದಿ