ಗಣೇಶೋತ್ಸವಕ್ಕೆ ಸರ್ಕಾರದ ನಿಯಮಾನುಸಾರ ಸರಳ ರೀತಿಯಲ್ಲಿ ಆಚರಿಸಲು ಅನುಮತಿ.
ಮಹಾಲಿಂಗಪುರ08: ಗಣೇಶ ಹಬ್ಬದ ಪ್ರಯುಕ್ತ ಸ್ಥಳೀಯ ಪೋಲೀಸ್ ಠಾಣೆ ಕರೆದ ಶಾಂತಿ ಸಭೆಯಲ್ಲಿ ಗಣೇಶೋತ್ಸವಕ್ಕೆ ಸರ್ಕಾರದ ನಿಯಮಾನುಸಾರ ಮೆರವಣಿಗೆಗೆ ಪರವಾನಿಗೆ ನಿಷೇಧಿಸಿ ಸರಳ ರೀತಿಯಲ್ಲಿ ಆಚರಿಸಲು ಅನುಮತಿ ನೀಡಲಾಯಿತು.
ಇದೇ ಸಮಯದಲ್ಲಿ ಪಿಎಸ್ಐ ವಿಜಯ ಕಾಂಬಳೆ ಮಾತನಾಡಿ, ಗಣೇಶ ಹಬ್ಬವನ್ನು ಸರಳ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಪೂರಕವಾಗುವಾಗುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಾರದಂತೆಯೂ ನಡೆದುಕೊಂಡು ಗಣೇಶ ಹಬ್ಬವನ್ನು ಆಚರಿಸಬೇಕು.
ಗಣೇಶ ಮೂರ್ತಿಯನ್ನು ವಾಡ್ರ್ಗೆ ಒಂದರಂತೆ ನಾಲ್ಕು ಅಡಿ ಹಾಗೂ ಮನೆಗಳಲ್ಲಿ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸಿ, ಸಮಿತಿಗಳು ಪುರಸಭೆಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು ಮತ್ತು ಗರಿಷ್ಠ 5 ದಿನಗಳಿಗಿಂತ ಹೆಚ್ಚಿಗೆ ಗಣೇಶೋತ್ಸವ ಆಚರಿಸುವಂತಿಲ್ಲ ಎಂದರು.
ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಬೋಕಿ ಮಾತನಾಡಿ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ಮೂರ್ತಿಗಳನ್ನು ತರುವ ಹಾಗೂ ವಿಸರ್ಜಿಸುವ ವೇಳೆ ಯಾವುದೇ ರೀತಿ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಡಿಜೆಗಳಿಗೆ ಅವಕಾಶವಿಲ್ಲ ಮತ್ತು ಮೆರವಣಿಗೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಪುರಸಭೆಯ ರಾಘು ನಡುವಿನಮನಿ ಮಾತನಾಡಿ, ಪಾರಂಪರಿಕ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ಪೂಜಿಸಿ ಅಲ್ಲಿಯೇ ವಿಸರ್ಜಿಸಿ ಹಾಗೂ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಪುರಸಭೆ ವತಿಯಿಂದ ನಿರ್ಮಿಸಲಾದ ಹೊಂಡ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್ಗಳಲ್ಲಿ ವಿಸರ್ಜಿಸಬೇಕು ಎಂದರು.
ಸುನೀಲ ಮುಗಳಖೋಡ, ಮಹಾಲಿಂಗಪ್ಪ ಜಕ್ಕನ್ನವರ, ಪಿಯೂಸ್ ಓಸ್ವಾಲ್, ವಿಠ್ಠಲ ಹೊಸಮನಿ, ರಾಜು ಕೋಳಿಗುಡ್ಡ, ಹೊಳೆಪ್ಪ ಬಾಡಗಿ, ವಿ.ಡಿ.ಮುಗಳ್ಯಾಳ, ರಾಜು ಹೊಸೂರ, ಶ್ಯಾಮ ನದಾಫ್, ರಾಘು ಗರಗಟ್ಟಿ, ಸುರೇಶ ಕಲಾಲ, ವಿಶ್ವನಾಥ ಹಿಟ್ಟಿನಮಠ, ರಾಮಣ್ಣ ಹಟ್ಟಿ, ಸುರೇಶ ಜಾಧವ, ಮನೋಜ ಬಸಂತಾನಿ ಇತರರು ಇದ್ದರು.