ನಿಸರ್ಗದ ಮುನಿಸು ಬಿರುಗಾಳಿ ಮಳೆಗೆ ಮಹಾಲಿಂಗಪುರ ಜನತೆ ಹೈರಾಣ: ಹನಮಂತ ಏಚ್ ನಾವಿ
ಸತತ ಕಾರ್ಯ ನಿರ್ವಹಿಸಿ ಪಟ್ಟಣಕ್ಕೆ ಬೆಳಕು ಹರಿಸಿದ ಸ್ಥಳೀಯ ಹೆಸ್ಕಾಂ ಕಾರ್ಯ ಶ್ಲಾಘನೀಯ !

ಮಹಾಲಿಂಗಪುರ 05: ನಿಸರ್ಗದ ಮುನಿಸಿನಿಂದ ಕೇವಲ 25ನಿಮಿಷಗಳ ಬಿರುಗಾಳಿ ಸಹಿತ ಮಳೆಗೆ ಪಟ್ಟಣದ ಜನತೆ ಹೈರಾಣಾಗಿ 48ಗಂಟೆಗಳ ಶಿಕ್ಷೆ ಅನುಭವಿಸಬೇಕಾಯಿತು ಅದು ಹೇಗೆ?
ಗುರುವಾರ ಸಂಜೆ ಏಳು ಗಂಟೆಗೆ ಆರಂಭಗೊಂಡ ಬಿರುಸಿನ ಮಳೆ ಊರಿನ ಪ್ರತಿ ವಾರ್ಡ್ ನಲ್ಲಿಯೂ ಒಂದಿಲ್ಲೊಂದು ಆವಾಂತರ ಸೃಷ್ಟಿ ಮಾಡಿ ಲಕ್ಷಾಂತರ ಹಾನಿಗೂ ಕಾರಣವಾಯಿತು. ಬೃಹತ್ ಮರಗಳು, ವಿದ್ಯತ್ ಕಂಬಗಳು, ಪತ್ರಾಸ್ ಶೆಡ್ಡಿನ ಮನೆ ಮತ್ತು ಅಂಗಡಿಗಳ ಮೇಲೆ ಬಿದ್ದು ಸರ್ವನಾಶಗೊಂಡವು. ಇದರಿಂದ ನೇಕಾರರು, ಕೂಲಿ ಕಾರ್ಮಿಕರು, ನೌಕರರು ಸೇರಿದಂತೆ ಎಲ್ಲ ವರ್ಗದ ಜನರೂ ತೊಂದರೆಗೀಡಾದರು.
ಅರೆಕಾವು : ಆಧುನಿಕ ಯುಗದಲ್ಲಿ ಫ್ಯಾನ್,ಎಸಿ, ಫಿಲ್ಟರ್ ನೀರು ಇಲ್ಲದೇ ಜನತೆ ಬದುಕಲಿಕ್ಕೆ ಸಾಧ್ಯವಿಲ್ಲದಂತಾಗಿದೆ ಮತ್ತು ಅಡುಗೆಗೂ ಸಹಿತ ಮೂಲ ವಿದ್ಯುತವೇ ಆಗಿದೆ. ಗುರುವಾರ ರಾತ್ರಿ 100ಕೆವಿ ಎರಡು ಟಿಸಿ ಗಳು ಸುಟ್ಟು ವಿಧ್ಯುತ್ ಕಡಿತಗೊಂಡಿತು. ಉಳ್ಳವರಲ್ಲಿಯ ಯುಪಿಎಸ್ ಗಳು ಸಹ 4-5 ಗಂಟೆಗಳ ನಂತರ ಸ್ಥಗಿತಗೊಂಡವು. ಆಗ ನೋಡಿ ಅಸಲಿ ಆಟ ಆರಂಭವಾಯಿತು. ಜನತೆ ಅರೆಕಾವು, ಸೊಳ್ಳೆಗಳ ಕಾಟದಿಂದ ಮನೆ ಹೊರಗಡೆ ನಿಸರ್ಗದ ತಂಪು ವಾತಾವರಣ ಪಡೆದು ತಡ ರಾತ್ರಿ ನಿದ್ರೆಗೆ ಜಾರಿ ಮೂರು ರಾತ್ರಿಗಳನ್ನು ಕಳೆದರು. ಈ ಸಂದರ್ಭ ವಿದ್ಯುತ್ ಹಾಗೂ ಹೆಸ್ಕಾಂನವರು ಎಷ್ಟು ಮಹತ್ವ ಉಳ್ಳವರಾಗಿದ್ದಾರೆಂದು ಜನತೆಯ ಅರಿವಿಗೂ ಕೂಡ ಬಂತು.
ನೀರಿಗಾಗಿ ಪರದಾಟ : ಜೀವ ಸಂಕೂಲಕ್ಕೆ ನೀರೇ ಆಧಾರ, ಹೊರತುಪಡಿಸಿದರೆ ಜೀವ ಸಂಕುಲದ ಬದುಕೇ ಇಲ್ಲ. ಮೂರು ದಶಕಗಳ ಹಿಂದೆ ನೀರಿಗಾಗಿ ಹಲವು ಕಿಲೋಮೀಟರ್ ಗಳಷ್ಟು ಅಲೆಯಬೇಕಾಗಿತ್ತು. ಈಗ ಮನೆಗೊಂದರಂತೆ ಬೋರ್ವೆಲ್, ಪುರಸಭೆ ನಲ್ಲಿ ಹೀಗೆ ನೀರಿನ ತಾಪತ್ರಯವಿಲ್ಲ.ಹಿಂದಿನದನ್ನು ಮರೆತು ಬದುಕುವುದಕ್ಕೆ ನಿಸರ್ಗ ತನ್ನ ಆರ್ಭಟ ಪ್ರದರ್ಶಿಸಿ ಪೂರ್ವಜರು ಅನುಭವಿಸಿದ ಕಷ್ಟಕಾರ್ಪಣಯಗಳನ್ನು ನೆನಪಿಸುತ್ತದೆ.ಮೊನ್ನೆ ರಾತ್ರಿ ಬಿರುಗಾಳಿ ಸಹಿತ ಮಳೆಯಿಂದ ಕೈ ಕೊಟ್ಟ ವಿದ್ಯುತ್ ನಿಂದ ಮನೆಯಲ್ಲಿಯ ನೀರು ಖಾಲಿಯಾಗಿ ಸ್ನಾನ ಮತ್ತು ಶೌಚಕ್ಕೂ ಪರದಾಡುವಂತಾಯಿತು. ಎಲ್ಲೆಂದರಲ್ಲಿ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನವೇ. ಫಿಲ್ಟರ್ ಗಳ ಮುಂದೆ ಸರತಿ ಸಾಲು.ಹಿಟ್ಟಿನ ಗಿರಣಿಗಳಲ್ಲಿ ಹೌಸ್ ಫುಲ್. ಶನಿವಾರ ಸಂಜೆ ವಿದ್ಯುತ್ ಬಂದಾಗಲೇ ಮಾತ್ರ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿತು.
ಸ್ಥಳೀಯ ಹೆಸ್ಕಾಂ ಕಾರ್ಯ ಶ್ಲಾಘನೀಯ : ಹೆಸ್ಕಾಂ ಮೂವರು ಅಧಿಕಾರಿಗಳು, 30ಜನ ಸಿಬ್ಬಂದಿಗಳು ಗುರುವಾರ ಸಂಜೆಯಿಂದ ಶನಿವಾರ ಸಂಜೆಯವರೆಗೂ ಎಡೆಬಿಡದೆ ಕೆಲಸ ಮಾಡಿದರೂ ಸಂಪೂರ್ಣ ಕೆಲಸ ಮುಗಿದಿರಲಿಲ್ಲ. ಬಿದ್ದ ನೂರಾರು ಕಂಬಗಳ ಮತ್ತು ವಿದ್ಯುತ್ ತಂತಿಗಳ ಜೋಡಣೆ ಇದರ ಜೊತೆಗೆ ಮರಗಳನ್ನು ಕತ್ತರಿಸಿ ಕೆಲಸಕ್ಕೆ ಅನುವು ಮಾಡಿಕೊಡುವುದು ಬೇರೆ ಒಟ್ಟಾರೆಯಾಗಿ ರಾತ್ರಿ 1ಗಂಟೆಯವರೆಗೆ ಊಟ ನಿದ್ರೆ ಇಲ್ಲದೆ ಸಿಬ್ಬಂದಿಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಕು ಹರಿಸಿದ ಹೆಸ್ಕಾಂ: ಪಟ್ಟಣದಾದ್ಯಂತ ಬಿರುಗಾಳಿಯಿಂದ ಊಹಿಸಲು ಅಸಾಧ್ಯವಾದ ಸಮಸ್ಯೆಗಳುಂಟಾಗಿದ್ದವು. ನಾಲ್ಕೈದು ದಿವಸಗಳ ಕೆಲಸವನ್ನು ಹೆಸ್ಕಾಂ ಮುತುವರ್ಜಿ ವಹಿಸಿ ಹಗಲು ರಾತ್ರಿ ಯುಧ್ಧೋಪಾದಿ 24 ಗಂಟೆಗಳಲ್ಲಿಯೇ ಅರ್ಧ ಊರಿಗೆ ವಿದ್ಯುತ್ ನೀಡಿ, ತದ ನಂತರವೂ ನಿರಂತರ ಕಾರ್ಯಪ್ರವೃತ್ತರಾಗಿ ಹೆಸ್ಕಾಂ ನವರು ಶನಿವಾರ ಸಂಜೆಯವರೆಗೆ ಪಟ್ಟಣದ ಎಲ್ಲ ಕಡೆಗೂ ಬೆಳಕು ಹರಿಸಿ ಕತ್ತಲೆ ಓಡಿಸಿದರು. ಎಇಇ ಸುರೇಶ ಮುರಗೋಡ, ವಿಭಾಗಿಯ ಶಾಖಾಧಿಕಾರಿ ರಾಜೇಶ್ ಬಾಗೋಜಿ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಶ್ರೀರಾಮ ಪತ್ತಾರ ಅವರ ಸಹಕಾರ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಗೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.